ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಚುರುಕಾದ ರಾಜಕೀಯ ಚಟುವಟಿಕೆ
ಶಿವಮೊಗ್ಗ, ಮೇ 25: ಕರ್ನಾಟಕ ಸರ್ಕಾರದಿಂದ ಪ್ರತಿಕ್ರಿಯೆ ಬಂದ ತಕ್ಷಣ ಪಾಲಿಕೆ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ. ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, 2011ರ ಜನಗಣತಿ ಪ್ರಕಾರ 3.22 ಲಕ್ಷ ಜನಸಂಖ್ಯೆ ಇದೆ. ಒಟ್ಟು 288 ಮತಗಟ್ಟೆಗಳಿವೆ. 2024-2025ರಂತೆ 1,33,479 ಪುರುಷ, 1,41,480 ಮಹಿಳೆ, 17 ಇತರೆ ಸೇರಿದಂತೆ 27,4976 ಮತದಾರರು ಇದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ. ಎಸ್. ಸಂಗ್ರೇಶಿ ಮಾತನಾಡಿ, "ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.

ಶಿವಮೊಗ್ಗ ಪಾಲಿಕೆಯಲ್ಲಿ ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಸಂಬಂಧಿಸಿದ ಮಂತ್ರಿಗಳು, ಮಾನ್ಯ ಮುಖ್ಯಮಂತ್ರಿಗಳಿಗೆ ಸಹ ಕೋರಲಾಗಿದೆ. ಸರ್ಕಾರದಿಂದ ಈ ಕುರಿತು ಸ್ಪಂದನೆ ಬಾರದ ಕಾರಣ ಸುಪ್ರೀಂಕೋರ್ಟ್ ಆದೇಶದನ್ವಯ ಉಚ್ಛ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿ ಪಾಲಿಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ಜೂನ್ ವೇಳೆಗೆ ಉಚ್ಛ ನ್ಯಾಯಾಲಯದಲ್ಲಿ ಈ ರಿಟ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಚುನಾವಣೆ ಕುರಿತು ಸರ್ಕಾರದಿಂದ ಸ್ಪಂದನೆ ಬಂದ ತಕ್ಷಣ ದಿನಾಂಕ ನಿಗದಿಗೊಳಿಸಲಾಗುತ್ತದೆ. ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ಚುನಾವಣೆಗೆ ಸಂಬಂಧಿಸಿದಂತೆ ಮತದಾತರರ ಪಟ್ಟಿ ತಯಾರಿಸುವ ವೇಳಾಪಟ್ಟಿ ಹೊರಡಿಸಲಾಗಿತ್ತು. ಕಾರಣಾಂತರದಿಂದ ಅದರ ಪ್ರಕಾರ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿಲ್ಲ. ಕರಡು ಮತದಾರರ ಪಟ್ಟಿ ಮಾತ್ರ ಸಿದ್ದವಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿಶೇಷವಾಗಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಸಿದ್ದ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಕರಡು ಮತದಾರರ ಪಟ್ಟಿ ಸಿದ್ದವಾಗಿದೆ. ಚುನಾವಣೆ ನಡೆಸಲು ಅಗತ್ಯವಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಕವಿತಾ ಯೋಗಪ್ಪನವರ್ ಮಾತನಾಡಿ, "ಆಗಸ್ಟ್ ತಿಂಗಳಿನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವೇಳಾಪಟ್ಟಿ ಹೊರಡಿಸಲಾಗಿದ್ದು, ದಿನಾಂಕ 19-08-2024 ರಿಂದ 24-08-2024 ರವರೆಗೆ ವಾರ್ಡುಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸಲಾಗಿದೆ. ಅಂತಿಮ ಚೆಕ್‌ಲಿಸ್ಟ್ ಪಡೆದುಕೊಂಡು ವಾರ್ಡ್ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಕಾರಣಾಂತರಗಳಿಂದ ಪ್ರಕಟಿಸಲಾಗಿಲ್ಲ.
ಶಿವಮೊಗ್ಗ ಪಾಲಿಕೆಯಲ್ಲಿ ನಿಕಾಯ (ಬಾಡಿ) ಇಲ್ಲದೇ ಒಂದೂವರೆ ವರ್ಷ ಆಗಿದೆ. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ. ಎಸ್. ಸಂಗ್ರೇಶಿ ವಹಿಸಿದ್ದರು.












Click it and Unblock the Notifications