ಶಿವಮೊಗ್ಗ ವಿಮಾನ ನಿಲ್ದಾಣ; 11 ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಮನವಿ
ಶಿವಮೊಗ್ಗ, ಫೆಬ್ರವರಿ 13; ಶಿವಮೊಗ್ಗ ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. ಶಿವಮೊಗ್ಗದಿಂದ 11 ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
ಬಿ. ವೈ. ರಾಘವೇಂದ್ರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಭೇಟಿ ಮಾಡಿದರು. ಶೀಘ್ರದಲ್ಲಿ ಆರಂಭಗೊಳ್ಳಲಿರುವ ಸೋಗಾನೆ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವ ಪೂರ್ವದಲ್ಲಿ ದೇಶದ ಬೇರೆ-ಬೇರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಸಂಬಂಧ ವಿಮಾನ ಸಂಚಾರಕ್ಕೆ ಅನುಕೂಲವಾಗುವಂತೆ ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಗೊಳಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣವಾಗಲಿವೆ. ಶಿವಮೊಗ್ಗದಿಂದ ದೇಶದ 11 ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಮಾನವಿ ಮಾಡಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಎಂಡಿಟಿ ತಂಡ ಕಳಿಸಿಕೊಡುವುದು ಮತ್ತು ಉಡಾನ್ 4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜನ ನೀಡುವ ಕುರಿತು ಸಂಸದರು ಚರ್ಚೆ ನಡೆಸಿದ್ದಾರೆ.
11 ಮಾರ್ಗಗಳು; ಶಿವಮೊಗ್ಗ ವಿಮಾನ ನಿಲ್ದಾಣದಿಂದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕುರಿತು ಮನವಿ ಮಾಡಲಾಗಿದೆ. ಮಾರ್ಗಗಳ ವಿವರ ಹೀಗಿದೆ
* ಮುಂಬೈ-ಶಿವಮೊಗ್ಗ-ಮುಂಬೈ
* ಮುಂಬೈ-ಶಿವಮೊಗ್ಗ-ಮಂಗಳೂರು
* ಮುಂಬೈ-ಶಿವಮೊಗ್ಗ-ಚೆನ್ನೈ
* ಮುಂಬೈ-ಶಿವಮೊಗ್ಗ-ತಿರುಪತಿ
* ಶಿವಮೊಗ್ಗ-ಕಲಬುರಗಿ-ಹೈದರಾಬಾದ್
* ಶಿವಮೊಗ್ಗ-ಕಲಬುರಗಿ-ದೆಹಲಿ
* ಬೆಂಗಳೂರು-ಶಿವಮೊಗ್ಗ-ಬೆಳಗಾವಿ
* ಬೆಂಗಳೂರು-ಶಿವಮೊಗ್ಗ-ದೆಹಲಿ
* ಬೆಂಗಳೂರು-ಶಿವಮೊಗ್ಗ-ಗೋವಾ
* ಹೈದರಾಬಾದ್-ಶಿವಮೊಗ್ಗ-ಕೊಚ್ಚಿನ್.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ 3,200 ಮೀಟರ್ ಅತಿ ಉದ್ದನೆಯ ರನ್‍ವೇ ನಿರ್ಮಾಣವಾಗುತ್ತಿದೆ. 2023ರ ಏಪ್ರಿಲ್‍ನಲ್ಲಿ ಕಾಮಗಾರಿ ಪೂರ್ಣಗೊಂಡು ಜೂನ್ ಹೊತ್ತಿಗೆ ವಿಮಾನ ನಿಲ್ದಾಣದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಾಗಿದೆ. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.
ಈಗಾಗಲೇ ಬೃಹತ್ ಯಂತ್ರಗಳು ಕೆಲಸವನ್ನು ಆರಂಭಿಸಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಯಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಟ್ಟು 662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.
ಒಟ್ಟು ಎರಡು ಹಂತದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ರನ್ ವೇ, ಟ್ಯಾಕ್ಸಿ ವೇ, ಏಫ್ರಾನ್, ಪೆರಿಫೆರಲ್ ರಸ್ತೆ ಮತ್ತು ಕಾಪೌಂಡ್ ನಿರ್ಮಾಣವಾಗುತ್ತಿದೆ. ಎರಡನೇ ಹಂತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಫೈರ್ ಸ್ಟೇಷನ್ ಕಟ್ಟಡ ಇತ್ಯಾದಿ ಕೆಲಸಗಳು ನಡೆಯಲಿವೆ.
ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇಯನ್ನು ಮೊದಲು 1,200 ಮೀಟರ್ ಉದ್ದ ಇರಲಿದೆ ಎಂದು ಯೋಜನೆ ತಯಾರಿಸಲಾಗಿತ್ತು. ಬಳಿಕ ನಡೆದ ವಿವಿಧ ಹಂತದ ಸಭೆಯಲ್ಲಿ ರನ್ ವೇಯನ್ನು 1,900 ಮೀಟರ್‌ಗೆ ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಬೇಕು ಎಂದು 2010ರಲ್ಲಿ ಯೋಜನೆ ರೂಪಿಸಲಾಗಿತ್ತು. 758 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗಿತ್ತು. ಬಳಿಕ ಯೋಜನೆ ವಿಳಂಬವಾಯಿತು. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಯೋಜನೆಗೆ ವೇಗೆ ನೀಡಿದರು.
ಕರ್ನಾಟಕ ಸರ್ಕಾರ ಈಗ ದಾವಣಗೆರೆ, ಹಾಸನ ಮತ್ತು ಕೊಪ್ಪಳದಲ್ಲಿಯೂ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ. ಹಾಸನದಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.












Click it and Unblock the Notifications