ಪ್ರಿಯಕರನಿಗಾಗಿ ಸಬ್ಇನ್ಸಪೆಕ್ಟರ್ ವೇಷ ತೊಟ್ಟ ಯುವತಿ

ಇಲ್ಲಿನ ವೆಂಕಟೇಶ ನಗರದ ನಿವಾಸಿ 17 ವರ್ಷದ ಯುವತಿಯೊಬ್ಬಳು ತನಗೆ ಸಬ್ಇನ್ಸಪೆಕ್ಟರ್ ಕೆಲಸ ಸಿಕ್ಕಿದೆ ಎಂದು ಸುಳ್ಳು ಹೇಳಿ ಹೆತ್ತವರಿಂದ ಲಕ್ಷಾಂತರ ರೂ ಪಡೆದು ಕಣ್ಣಾಮುಚ್ಚಾಲೆ ಆಡಿದ್ದಾಳೆ. ಕೊನೆಗೆ ಪ್ರಕರಣ ಪೊಲೀಸ್ ಮೆಟ್ಟಿಲೇರಿದಾಗ ಸ್ಥಳೀಯ ಪೊಲೀಸರು ಭಣದ್ರವಾತಿಯಲ್ಲಿದ್ದ ಯುವತಿಯನ್ನು ವಾಪಸ್ ಕರೆತಂದಿದ್ದಾರೆ.
ಸದರಿ ಕಥಾನಾಯಕಿ ತನಗೆ ಬೆಂಗಳೂರಿನಲ್ಲಿ ಸಬ್ಇನ್ಸಪೆಕ್ಟರ್ ಕೆಲಸ ಸಿಕ್ಕಿದೆ ಎಂದು ಹೆತ್ತವರಿಗೆ ಸುಳ್ಳು ಹೇಳಿದ್ದಳು. ಅಷ್ಟೇ ಅಲ್ಲ, ಅದನ್ನು ಸಾಬೀತುಪಡಿಸುವಂತೆ ಸಬ್ಇನ್ಸಪೆಕ್ಟರ್ ವೇಷಭೂಷಣ ತೊಟ್ಟು ಪೋಟೋ ತೆಗೆಸಿ ಅದನ್ನು ಪೋಷಕರಿಗೆ ತೋರಿಸಿ, ಅವರನ್ನು ಸಾರ್ಥಕತೆಯ ಸ್ವರ್ಗದಲ್ಲಿ ತೇಲುವಂತೆ ಮಾಡಿದ್ದಳು.
ಅದಾದ ನಂತರ ಸಬ್ಇನ್ಸಪೆಕ್ಟರ್ ತರಬೇತಿ ಮತ್ತಿತರ ಖರ್ಚಿಗೆಂದು ಪೋಷಕರಿಂದ ಸಮಯ ಸಾಧಿಸಿ ಹಣ ಪೀಕಿದ್ದಾಳೆ. ಈ ಮಧ್ಯೆ ಒಂದಷ್ಟು ದಿನ ಮನೆ ಕಡೆ ತಲೆ ಹಾಕದೆ, ತನಗೆ ಮದುವೆಯಾಗಿರುವುದಾಗಿ ಪೋಷಕರಿಗೆ ಸಂದೇಶ ರವಾನಿಸಿದ್ದಾಳೆ. ಎಲ್ಲೋ ಏನೋ ಎಡವಟ್ಟಾಗುತ್ತಿದೆ ಎಂದು ಎಚ್ಚೆತ್ತ ಪೋಷಕರು ಸೀದಾ ಪೊಲೀಸ್ ಠಾಣೆಗೆ ಹೋಗಿ ಮಗಳ ಬಗ್ಗೆ ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಕೈಗೊಂಡ ಪೊಲೀಸರು, ಸದರಿ ಯುವತಿಗೆ ಕೆಲಸ ಸಿಕ್ಕಿಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಮುಂದೆ ಮನೆಯವರ ಒತ್ತಾಯದ ಮೇರೆಗೆ ಯುವತಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಅದೇ ಪ್ರಯತ್ನದಲ್ಲಿದ್ದಾಗ ಭಧ್ರಾವತಿಯಲ್ಲಿ ನಿನ್ನೆ ಗುರುವಾರ ತನ್ನ ಪ್ರಿಯಕರ, ಆಟೋ ಚಾಲಕನ ಮಡಿಲಲ್ಲಿದ್ದ ಯುವತಿಯನ್ನು ಪತ್ತೆ ಹಚ್ಚಿ ಮನೆಗೆ ಕರೆತಂದು ಬಿಟ್ಟಿದ್ದಾರೆ.












Click it and Unblock the Notifications