34 ಸಾವಿರ ರೂ. ಮೊಬೈಲ್‌ಗೆ ಈಗ 59 ಸಾವಿರ ದಂಡ ಕಟ್ಟುವ ಕಂಪನಿ!
ಶಿವಮೊಗ್ಗ, ಅಕ್ಟೋಬರ್ 12: ದೋಷಪೂರಿತ ಮೊಬೈಲ್ ಮಾರಾಟ ಮಾಡಿದ್ದಲ್ಲದೇ, ಅದನ್ನು ರಿಪೇರಿ ಮಾಡಲು ಸಹ ನಿರಾಕರಿಸಿದ ಕಂಪನಿ ಈಗ ದಂಡಕಟ್ಟಬೇಕಿದೆ. ಕಾನೂನು ಹೋರಾಟದಲ್ಲಿ ಗ್ರಾಹಕನಿಗೆ ಗೆಲುವು ಸಿಕ್ಕಿದ್ದು, 34 ಸಾವಿರೂ ಬೆಲೆಯ ಮೊಬೈಲ್‌ಗೆ ಈಗ ಕಂಪನಿ 59 ಸಾವಿರ ರೂ. ದಂಡ ಪಾವತಿ ಮಾಡುವಂತೆ ಆದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈ ಕುರಿತ ದೂರು ವಿಚಾರಣೆ ನಡೆಸಿ, ಆದೇಶವನ್ನು ಪ್ರಕಟಿಸಿದೆ.
ಈ ಪ್ರಕರಣದಲ್ಲಿ ದೂರುದಾರ ಚೇತನ್. ತಾವು ಖರೀದಿಸಿದ ಮೊಬೈಲ್‌ನಲ್ಲಿ ದೋಷವಿದ್ದು ರಿಪೇರಿ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು. ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಹಾಗೂ ಮೊಬೈಲ್ ಕೇರ್, ಶಿವಮೊಗ್ಗ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ದೂರುದಾರ ಚೇತನ್. ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು 1ನೇ ಎದುರುದಾರ, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ 2ನೇ ಎದುರುದಾರ ಮತ್ತು ಮೊಬೈಲ್ ಕೇರ್ ಶಿವಮೊಗ್ಗ, 3ನೇ ಎದುರುದಾರ. ಚೇತನ್ ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಇವರ ಬಳಿ ಖರೀದಿ ಮಾಡಿದ ಮೊಬೈಲ್‌ನಲ್ಲಿ ಖರೀದಿಸಿದ ದಿನಾಂಕದಿಂದಲೂ ದೋಷ ಕಂಡುಬಂದಿದೆ ಎಂದು ದೂರು ದಾಖಲಿಸಿದ್ದರು.
ಹಲವಾರು ಬಾರಿ ರಿಪೇರಿ ಮಾಡಿಕೊಡಲು ವಿನಂತಿಸಿದರೂ ಸಹ ಒಮ್ಮೆ ರಿಪೇರಿ ಮಾಡಿಕೊಟ್ಟರು. ನಂತರವೂ ಮೊಬೈಲ್‌ನಲ್ಲಿ ದೋಷ ಕಂಡುಬಂದಿದ್ದು, ಪುನಃ ತೋರಿಸಿದಾಗ ಸ್ಪಂದಿಸಲಿಲ್ಲ. ಆದ್ದರಿಂದ ಮೊಬೈಲ್‌ನ್ನು ರಿಪೇರಿ ಮಾಡಿಕೊಡಲು ವಕೀಲರ ಮುಖಾಂತರ ಲೀಗಲ್ ನೋಟೀಸ್ ನೀಡಿದರೂ ಸಹ ರಿಪೇರಿ ಮಾಡಿಕೊಡಲಿಲ್ಲ. ಆದ್ದರಿಂದ ಆಯೋಗದ ಮುಂದೆ ಅರ್ಜಿ ಸಲ್ಲಿಸಿದರು.
ಎಷ್ಟು ಪರಿಹಾರ ಕೇಳಿದರು?; ಚೇತನ್ ಮೊಬೈಲ್‌ನಲ್ಲಿನ ತಯಾರಿಕಾ ದೋಷದ ಕಾರಣ ಮೊಬೈಲ್ ಖರೀದಿಯ ಮೊತ್ತ ರೂ. 40,800ಗಳನ್ನು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಆದ ಮಾನಸಿಕ ಹಿಂಸೆಗೆ ರೂ. 50,000 ಹಾಗೂ ರೂ. 20,000 ವೆಚ್ಚಗಳನ್ನು ನೀಡಲು ಆದೇಶಿಸಬೇಕು ಎಂದು ಮನವಿ ಮಾಡಿದ್ದರು.
ದೂರು ದಾಖಲಿಸಿಕೊಂಡು ಆಯೋಗ ಎದುರುದಾರರಿಗೆ ನೋಟಿಸ್ ನೀಡಿತು. ಆದರೆ ನೋಟಿಸ್ ಪಡೆದರೂ ಸಹ ಆಯೋಗದ ಮುಂದೆ ಹಾಜರಾಗದ ಕಾರಣ ಎದುರುದಾರರನ್ನು ಏಕ-ಪಕ್ಷೀಯವೆಂದು ತೀರ್ಮಾನಿಸಲಾಗಿರುತ್ತದೆ ಹಾಗೂ ದೂರಿನ ವಿಚಾರಣೆ ಮಾಡಲಾಯಿತು. ದೂರಿನ ಅಂಶಗಳು, ದೂರುದಾರರ ಪರ ವಕೀಲರ ವಾದವನ್ನು ಆಲಿಸಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು.
ಆಯೋಗವು ಮೊಬೈಲ್ ಖರೀದಿಸಿರುವುದು ಸಲ್ಲಿಸಿರುವ ರಸೀದಿಯಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ ಅನ್ನು ರಿಪೇರಿಗಾಗಿ ನೀಡಿರುವುದು ಸರ್ವೀಸ್ ಚಲನ್‌ನಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ ರಿಪೇರಿ ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದರೂ ಎದುರುದಾರರು ಸರಿಯಾದ ರೀತಿಯಲ್ಲಿ ಮೊಬೈಲ್ ರಿಪೇರಿ ಮಾಡಿಕೊಡದ ಕಾರಣ ಮೊಬೈಲ್ ಹಣ ವಾಪಸ್ ನೀಡಲು ಕೋರಿರುವುದು ವಕೀಲರು ಕಳುಹಿಸಿರುವ ಲೀಗಲ್ ನೋಟಿಸ್ ಮೂಲಕ ಖಾತರಿಯಾಗಿದೆ ಎಂದು ಹೇಳಿದೆ.
ದೂರುದಾರರು ಮಾಡಿರುವ ಆರೋಪಗಳಿಗೆ ಮತ್ತು ಸಲ್ಲಿಸಿರುವ ದಾಖಲೆಗಳಿಗೆ 1 ಮತ್ತು 2ನೇ ಎದುರುದಾರರು ಸ್ಥಳೀಯವಾಗಿ ಶಿವಮೊಗ್ಗದಲ್ಲೇ ಇದ್ದರೂ ಸಹ ಹಾಜರಾಗಿ ದೂರುದಾರರು ಮಾಡಿರುವ ಆಪಾದನೆಗಳು ಸುಳ್ಳು ಎಂದಾಗಲಿ ಅಥವಾ ತಮ್ಮ ವಿರುದ್ಧ ದೂರುದಾರರು ಮಾಡಿರುವ ಆಪಾದನೆಗಳನ್ನು ಅಲ್ಲಗೆಳೆಯುವಂತಹ ಯಾವುದೇ ದಾಖಲೆಗಳನ್ನು ಮಂಡಿಸಿರುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿದ ಆಯೋಗವು ಅರ್ಜಿದಾರರು ಖರೀದಿಸಿದ ಮೊಬೈಲ್ ಉತ್ಪಾದನಾ ದೋಷದಿಂದ ಕೂಡಿದ್ದು ರಿಪೇರಿ ಮಾಡಿಕೊಡಲು ವಿಫಲರಾಗಿದ್ದು, ಎದುರುದಾರರ ಸೇವಾ ನ್ಯೂನ್ಯತೆಯಾಗಿರುತ್ತದೆಂದು ಪರಿಗಣಿಸಿ ತೀರ್ಪನ್ನು ನೀಡಿದೆ.
ಮೊಬೈಲ್ ಖರೀದಿಸಿದ ಮೊತ್ತ ರೂ. 34,576 (ಜಿಎಸ್‌ಟಿ ರೂ. 6.223.73 ಹೊರತುಪಡಿಸಿ)ಗಳನ್ನು ಶೇ. 9 ಬಡ್ಡಿಯೊಂದಿಗೆ ದಿ 01/01/2024 ರಿಂದ ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರಿಂದ ಅರ್ಜಿದಾರರಿಗೆ ಉಂಟಾದ ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ರೂ.15,000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳಿಗಾಗಿ ರೂ.10,000 ಗಳನ್ನು ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಸದಸ್ಯರಾದ ಸವಿತಾ. ಬಿ. ಪಟ್ಟಣಶೆಟ್ಟಿ ಮತ್ತು ಬಿ. ಡಿ. ಯೋಗಾನಂದ ಭಾಂಡ್ಯ ಇವರನ್ನು ಒಳಗೊಂಡ ಪೀಠವು ಆದೇಶಿಸಿದೆ.












Click it and Unblock the Notifications