ರಾಜ್ಯದಲ್ಲಿ ಆಮ್ ಆದ್ಮಿಗೆ ಗುದ್ದು ನೀಡಿದ ಕುಮಾರಸ್ವಾಮಿ
ಶಿವಮೊಗ್ಗ, ಫೆ. 18: ದಿಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಲೋಕಸಭಾ ಚುನಾವಣೆಯತ್ತ ಗಮನ ನೆಟ್ಟಿರುವ ಅರವಿಂದ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಜಾತ್ಯತೀತ ಜನತಾದಳದ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮಟ್ಟಿಗೆ ಗುದ್ದು ನೀಡಿದ್ದಾರೆ.
'ಆಮ್ ಆದ್ಮಿ ಪಕ್ಷ ಕೇವಲ ಶೋಕಿಗಾಗಿ ಚುನಾವಣಾ ಆಖಾಡಕ್ಕೆ ಇಳಿದಿದೆಯೇ ಹೊರತು ಸಮಾಜದ ಉದ್ಧಾರ ಹಾಗೂ ರಾಜಕಾರಣಕ್ಕೆ ಅಲ್ಲ' ಎಂದು ಛೇಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ, ಏನೂ ಸಾಧನೆ ಮಾಡದೆ ಪಲಾಯನಗೈದು ಮತ್ತೆ ಜನರ ಮೇಲೆ ಚುನಾವಣೆ ಹೊರೆಸುವ ಮೂಲಕ ಅರವಿಂದ ಕೇಜ್ರಿವಾಲಾ ಅವರು ರಾಜಕೀಯ ಅರಾಜಕತೆ ಸೃಷ್ಟಿಸಿದ್ದಾರೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಿಂದ 13 ಸ್ಥಾನ ಗೆಲ್ಲುವ ಗುರಿಯನ್ನು ಜೆಡಿಎಸ್ ಪಕ್ಷ ಹೊಂದಿದೆ. ಎಲ್ಲೆಡೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮತ್ತು ಒಬ್ಬರಿಗೊಬ್ಬರು ಕಾಲೆಳೆಯುವ ಪ್ರವೃತ್ತಿ ಮತ್ತು ಕೇವಲ ಘೋಷಣೆಗಳನ್ನು ಮಾಡಿಕೊಂಡು ಜನಪರ ಯೋಜನೆಗಳನ್ನು ನಿರ್ಲಕ್ಷ್ಯಿಸಿರುವ ಸಿದ್ದರಾಮಯ್ಯ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಡಿಕೆ ಹೇಳಿದರು.
ನರೇಂದ್ರ ಮೋದಿ ರಾಜ್ಯಕ್ಕೆ ಬಂದಿದ್ದಾರೆ. ಬಿಜೆಪಿ ನಾಯಕರು ಮತ್ತೆ ಸಭ್ಯರೆಂಬ ಮುಖವಾಡ ತೊಟ್ಟು ಜನರ ಮುಂದೆ ಹೋಗಿದ್ದಾರೆ. ಅವರ ನಿಜಮುಖ ಈಗಾಗಲೇ ಗೊತ್ತಾಗಿದೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.












Click it and Unblock the Notifications