ಸಂಸದ ಬಿವೈ ರಾಘವೇಂದ್ರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 16 ಲಕ್ಷ ದೋಚಿದ್ದ ಮುಂಬೈ ಹ್ಯಾಕರ್
ಶಿವಮೊಗ್ಗ, ಅಕ್ಟೋಬರ್ 12: ಸಂಸದ ಬಿ.ವೈ.ರಾಘವೇಂದ್ರ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಹ್ಯಾಕರ್ ಒಬ್ಬ 16 ಲಕ್ಷ ರೂ. ಹಣ ಲಪಟಾಯಿಸಿದ್ದ. ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆಂದು ರಾಘವೇಂದ್ರ ಅವರು ಹೇಳಿಕೊಂಡಿದ್ದಾರೆ.
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕ್ ಡಿಜಟಲ್ ಪಾವತಿ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ತಮ್ಮ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಹಣ ಲಪಟಾಯಿಸಿದ ಘಟನೆಯನ್ನು ವಿವರಿಸಿದರು.
ಸಂಸದ ರಾಘವೇಂದ್ರ ಹೇಳಿದ್ದೇನು?
ಬ್ಯಾಂಕಿಂಗ್ ವ್ಯವಸ್ಥೆ ಡಿಜಿಟಲಿಕರಣಗೊಂಡಿದೆ. ಈ ವೇಳೆ ಗ್ರಾಹಕರು ಅತ್ಯಂತ ಎಚ್ಚರಿಕೆ ವಹಿಸಬೇಕಿದೆ. ಒಟಿಪಿ ನಂಬರ್ ಕುರಿತು ಮುತುವರ್ಜಿಯಿಂದ ಇರಬೇಕು. ವಾಟ್ಸಪ್ ಮೂಲಕ ಅಥವಾ ಮೆಸೇಜ್ ಮೂಲಕ ಒಟಿಪಿ ಕೇಳುತ್ತಾರೆ. ಬ್ಯಾಂಕುಗಳು ಹಾಗೆ ಒಟಿಪಿ ನಂಬರ್ ಕೇಳುವುದಿಲ್ಲ. ಅನುಮಾನ ಬಂದರೆ ನೇರವಾಗಿ ಬ್ಯಾಂಕನ್ನು ಸಂಪರ್ಕಿಸಬೇಕು ಎಂದು ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದ ನನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಹಣ ದಿಢೀರ್ ವರ್ಗಾವಣೆಯಾಗಿತ್ತು. ಆದರೆ ಆ ಖಾತೆಯಿಂದ ನಾನು ಯಾವುದೇ ಹಣ ವರ್ಗಾವಣೆ ಮಾಡಿರಲಿಲ್ಲ. ಹಾಗಾಗಿ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೆ. ತನಿಖೆ ನಡೆಸಿದ ಪೊಲೀಸರು ಮುಂಬೈನಲ್ಲಿ ಹ್ಯಾಕರ್ ಒಬ್ಬನನ್ನು ಪತ್ತೆ ಹಚ್ಚಿದರು. ಆತನನ್ನು ಬಂಧಿಸಿದರು. ನನ್ನ ಹಾಗೆ ಹಲವರಿಗೆ ಆ ಹ್ಯಾಕರ್ ವಂಚಿಸಿದ್ದ. ಕೊನೆಗೆ ನನ್ನ ಖಾತೆಗೆ ಹಣ ವಾಪಸ್ ಬಂತು ಎಂದು ತಿಳಿಸಿದರು.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದರ ಜೊತೆಗೆ ಎಚ್ಚರಿಕೆ ಕೂಡ ಅನಿವಾರ್ಯ. ಡಿಜಿಟಲ್ ವ್ಯವಸ್ಥೆ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆರ್.ಬಿ.ಐ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅತ್ಯಂತ ಸುರಕ್ಷಿತವಾಗಿ ರೂಪಿಸಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಎಜಿಎಂ ಪ್ರದೀಪ್ ಕುಮಾರ್ ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಪ ಮಹಾ ಪ್ರಬಂಧಕ ಎ.ರಾಜಮಣಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ನಬಾರ್ಡ್ ಅಧಿಕಾರಿ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications