POCSO Case: ತಂದೆ ವಿರುದ್ಧ ಗಂಭೀರ ಆರೋಪದ ಬಗ್ಗೆ ಬಿ.ವೈ ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗ, ಜೂನ್ 14: ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಈ ಬಗ್ಗೆ ಶಿವಮೊಗ್ಗದ ನೂತನ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದ್ದು, ನಮ್ಮ ತಂದೆ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದ್ಯ ಶಿವಮೊಗ್ಗದಲ್ಲಿದ್ದೇನೆ. ಮಾಧ್ಯಮಗಳ ಮೂಲಕನೇ ಈ ವಿಚಾರ ತಿಳಿದಿದೆ. ಇದೀಗ ಪೂಜ್ಯ ತಂದೆಯವರ ಮೇಲೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಆಗಿದೆ ಎಂದು ತಿಳಿದು ಬಂದಿದೆ. ಸುಮಾರು ಎರಡುವರೆ ತಿಂಗಳ ಹಿಂದೆ ಆದ ದೂರಿದು. ಇದರಲ್ಲಿ ಏನೂ ಸತ್ಯಸತ್ಯತೆ ಇಲ್ಲ ಎಂದಿದ್ದಾರೆ.

ದೂರು ನೀಡಿರುವ ಮಹಿಳೆ 50 ಅಧಿಕಾರಿಗಳ ಮೇಲೆ ಇದೇ ರೀತಿ ದೂರು ನೀಡಿದ್ದಾರೆ. ಗೃಹ ಸಚಿವರೇ ಮಾನಸಿಕವಾಗಿ ತೊಂದ್ರೆಯಲ್ಲಿ ಇರುವಂತಹ ಹೆಣ್ಣು ಮಗಳು ಎಂಬ ಅರ್ಥದಲ್ಲಿ ಹೇಳಿದ್ದರು. ನಾವು ಹಾಗೇ ಎಂದುಕೊಂಡಿದ್ದೆವು. ಆದರೆ, ಚುನಾವಣೆ ನಂತರ ಹೀಗೆ ಆಗಿದೆ. ಈ ಹಿಂದೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡಿ, ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು. ಇಂದು ಸಹ ವೈಯಕ್ತಿಕವಾದ ಘಟನೆ ಆಗಿದೆ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ. ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದರು.
ಇನ್ನು ಶಿವಮೊಗ್ಗ ಕಾರ್ಯಕರ್ತರಿಂದ ಅಭಿನಂದನೆ, ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಹೊರಹೊಮ್ಮಿದ್ದಕ್ಕೆ ಸಂತಸವಾಗುತ್ತಿದೆ. ನಾನು ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ನನಗೆ ಹಿರಿಯರು ಧೈರ್ಯ ತುಂಬಿದರು. ಶಿವಮೊಗ್ಗಕ್ಕೆ ಇರುವ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡುತ್ತೇನೆ ಮತ್ತೊಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾನು ಉತ್ಸುಕನಾಗಿದ್ದೆನೆ ಎಂದು ಹೇಳಿದರು.
ನಾನು ಸಂಸದನಾಗಿ ಆಯ್ಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಾಗಿ ಅಪ್ರೂವಲ್ ಕಾಪಿ ಬಂದಿದೆ. ಕೇಂದ್ರ ಸರ್ಕಾರ 5,756 ಕೋಟಿ ರೂ. ಅನುದಾನ ನೀಡಿದೆ. ರಾಜ್ಯದ 8 ಕ್ಷೇತ್ರಗಳಿಗೆ ಈ ಅನುದಾನ ನೀಡಿದೆ. ಇದರಲ್ಲಿ 2.600 ಕೋಟಿ ರೂ. ಶಿವಮೊಗ್ಗಕ್ಕೆ ಕೇಂದ್ರ ಸರ್ಕಾರ ನೀಡಿದೆ ಎಂದರು.

ಇಂದು ನನಗೆ ಸನ್ಮಾನ ಸ್ವೀಕರಿಸುವ ಮನಸ್ಸು ಇಲ್ಲ. ನನ್ನ ಮನೆಯಲ್ಲಿ ಹೋಳಿಗೆ ಊಟ ಮಾಡುವ ಪರಿಸ್ಥಿತಿ ಇಲ್ಲ. ನಮ್ಮ ತಂದೆಯವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ. ರಾಜಕೀಯ ಷಡ್ಯಂತ್ರದಿಂದ ನಮ್ಮ ಕುಟುಂಬ ಬೇಸರದಲ್ಲಿದ್ದೇವೆ. ಆದರೆ ದೇವ ದುರ್ಲಬ ಕಾರ್ಯಕರ್ತರ ಕರೆಗೆ ಓಗೊಟ್ಟು ಬಂದಿದ್ದೆನೆ ಅಷ್ಟೇ. ನಮ್ಮ ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications