ಶಿವಮೊಗ್ಗದಲ್ಲಿ ಮಳೆಯ ಅಬ್ಬರ, ಡ್ಯಾಂಗಳ ನೀರಿನ ಮಟ್ಟ
ಶಿವಮೊಗ್ಗ, ಜೂನ್ 11: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಆದರೆ ಜೂನ್ 10ರ ತನಕ ಅಬ್ಬರದ ಎಲ್ಲಾ ಜಿಲ್ಲೆಗಳಲ್ಲಿ ಸುರಿದಿಲ್ಲ. ಮಲೆನಾಡ ಜಿಲ್ಲೆಯಾದ ಶಿವಮೊಗ್ಗದಲ್ಲಿಯೂ ಸಾಮಾನ್ಯ ಮಳೆಯಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮತ್ತು ಜಲಾಶಯದ ನೀರಿನ ಮಟ್ಟದ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 75.60 ಮಿ. ಮೀ. ಮಳೆಯಾಗಿದ್ದು, ಸರಾಸರಿ 10.80 ಮಿ. ಮೀ. ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿ. ಮೀ. ಇದ್ದು, ಇದುವರೆಗೆ ಸರಾಸರಿ 87.64 ಮಿ. ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾದರೆ ಲಿಂಗನಮಕ್ಕಿ ಡ್ಯಾಂ ತುಂಬಿ ರಾಜ್ಯದ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ.
ಕಳೆದ 24 ಗಂಟೆಯಲ್ಲಿ ಶಿವಮೊಗ್ಗದಲ್ಲಿ 06.10 ಮಿ. ಮೀ., ಭದ್ರಾವತಿಯಲ್ಲಿ 02.70 ಮಿ. ಮೀ., ತೀರ್ಥಹಳ್ಳಿ 12.60 ಮಿ. ಮೀ., ಸಾಗರ 28.00 ಮಿ. ಮೀ., ಶಿಕಾರಿಪುರ 04.20 ಮಿ. ಮೀ., ಸೊರಬ 05.70 ಮಿಮಿ. ಹಾಗೂ ಹೊಸನಗರ 16.30 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ: ಸಾಗರದಲ್ಲಿರುವ ಲಿಂಗನಮಕ್ಕಿ ಡ್ಯಾಂ ಗರಿಷ್ಟ ಮಟ್ಟ 1,819 ಅಡಿಗಳು. 1745.25 (ಇಂದಿನ ಮಟ್ಟ), 4222 (ಒಳಹರಿವು), 2169.84 (ಹೊರಹರಿವು). ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1744.20. ಇತ್ತು.
ಭದ್ರಾ ಡ್ಯಾಂ 186 (ಗರಿಷ್ಠ). 117.11 (ಇಂದಿನ ಮಟ್ಟ), 2911.00 (ಒಳಹರಿವು), 341.00 (ಹೊರಹರಿವು), ಕಳೆದ ವರ್ಷದ ನೀರಿನ ಮಟ್ಟ 137.40.
ತುಂಗಾ ಜಲಾಶಯ, ಗಾಜನೂರು. 588.24 (ಗರಿಷ್ಠ), 588.02 (ಇಂದಿನ ಮಟ್ಟ), 3399.00 (ಒಳಹರಿವು), 344.00 (ಹೊರಹರಿವು). ಕಳೆದ ವರ್ಷ ನೀರಿನ ಮಟ್ಟ 584.22.
ಮಾಣಿ ಡ್ಯಾಂ. 595 (ಎಂಎಸ್‍ಎಲ್‍ಗಳಲ್ಲಿ), 572.20 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 584 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‌ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 569.88 (ಎಂಎಸ್‍ಎಲ್‍ಗಳಲ್ಲಿ).
ಮಳೆಗಾಗಿ ಜನರ ಪ್ರಾರ್ಥನೆ: 2023ರಲ್ಲಿ ಶಿವಮೊಗ್ಗದಲ್ಲಿಯೂ ಮಳೆ ಕೈ ಕೊಟ್ಟಿತ್ತು. ಆದ್ದರಿಂದ ಮಲೆನಾಡಿನ ಜನರಿಗೂ ಬರದ ಬಿಸಿ ತಟ್ಟಿತ್ತು. ತುಂಗ, ಭದ್ರಾ ನದಿಗಳ ನೀರಿನ ಮಟ್ಟ ಗಣನೀಯವಾಗಿ ಇಳಿದಿತ್ತು. ಮೇ ತಿಂಗಳಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ ಜನರಿಗೆ ಕೊಂಚ ನೆಮ್ಮದಿ ತಂದಿದೆ.
ಕಳೆದ ವರ್ಷ ಡ್ಯಾಂಗಳು ಭರ್ತಿಯಾಗದ ಕಾರಣ ಜನರಿಗೆ ಸಮಸ್ಯೆ ಉಂಟಾಗಿತ್ತು. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತಗೊಂಡಿದ್ದು, ಸಿಗಂದೂರು ಲಾಂಚ್‌ನಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಬೈಕ್ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಲಾಂಚ್ ಬಳಸಲಾಗುತ್ತಿದೆ.
ಮಳೆ ಕೊರತೆ ಮುಂದುವರೆದರೆ 16 ದಿನದಲ್ಲಿ ಲಾಂಚ್ ಸೇವೆ ಸಂಪೂರ್ಣ ಬಂದ್ ಆಗಲಿದೆ. ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿನ ಕಳಸವಳ್ಳಿ ಮತ್ತು ಅಂಬರಗೋಡ್ಲು ನಡುವೆ ಸಂಪರ್ಕ ಕಲ್ಪಿಸುವ ಲಾಂಚ್ ಎರಡು ಬದಿಯಲ್ಲಿ ಪ್ಲಾಟ್ ಫಾರ್ಮ್‌ಗಿಂತ ಕೆಳಗೆ ನೀರಿನ ಸಂಗ್ರಹವಿದೆ.
ಈ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಲಾಂಚ್ ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಿಗಂದೂರು, ಕರೂರು, ಬಾರಂಗಿ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಸಂಚಾರ ಬಂದ್ ಆದರೆ ಜನರು 90 ಕಿಲೋಮೀಟರ್ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಲಿದೆ.












Click it and Unblock the Notifications