ವಿರೋಧ ಪಕ್ಷದ ಬಾಯಿ ಮುಚ್ಚುವ ಕೆಲಸ ಆಗಿದೆ: ಮಧು ಬಂಗಾರಪ್ಪ
ಶಿವಮೊಗ್ಗ, ಜುಲೈ 28: "ವಿರೋಧ ಪಕ್ಷದವರ ಬಾಯಿ ಮುಚ್ಚುವ ಕೆಲಸ ಆಗಿದೆ. ಕಾಂಗ್ರೆಸ್ ಬಂದರೆ ಬರಗಾಲ ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ ಉತ್ತಮ ಮಳೆಯಾಗಿದೆ, ರಾಜ್ಯದ ಎಲ್ಲಾ ಜಲಾಶಯ ಭರ್ತಿಯಾಗಿವೆ" ಎಂದು ಶಿಕ್ಷಣ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾನುವಾರ ಸಚಿವರು ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿರುವ ತುಂಗಾ ಜಲಾಶಯದಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದರು. ಜಲಾಶಯದ ಸ್ಥಿತಿ-ಗತಿ, ನೀರಿನ ಲಭ್ಯತೆ, ಒಳ ಮತ್ತು ಹೊರ ಹರಿವಿನ ಪ್ರಮಾಣ ಮೊದಲಾದವುಗಳ ಮಾಹಿತಿ ಪಡೆದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ತುಂಗಾ ಜಲಾಶಯದಲ್ಲಿ ಹೂಳು ತೆಗೆಯಲು ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ಜಲಾಶಯದ ಸಣ್ಣಪುಟ್ಟ ರಿಪೇರಿ ಕಾರ್ಯ ಇದೆ. ಅದು ಮಾಡಬೇಕಿದೆ. ಸುಮ್ಮನೆ ಹೂಳು ತೆಗೆಯೋ ಬಗ್ಗೆ ಮಾತಾನಾಡೋದು ಸರಿಯಲ್ಲ. ಜಲಾಶಯ ನಿರ್ಮಾಣ ಮಾಡಿದ್ದು ಬಂಗಾರಪ್ಪನವರು ಅವತ್ತು ತುಂಗಾ ಜಲಾಶಯ ಮಾಡದಿದ್ದರೆ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಇರುತ್ತಿರಲಿಲ್ಲ" ಎಂದರು.
ನೆರೆ ಪೀಡಿತ ಪ್ರದೇಶಕ್ಕೆ ಭೇಟಿ: ಬಳಿಕ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ವಿದ್ಯಾನಗರದ ಭೋವಿ ಕಾಲೋನಿ ನಿವಾಸಿ ಲಕ್ಷ್ಮಮ್ಮ, ಕೃಷ್ಣಪ್ಪ ಅವರ ಮನೆಯು ಮಳೆಗೆ ಕುಸಿದಿದ್ದು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸರ್ಕಾರದಿಂದ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಅಧಿಕಾರಿಗಳ ಜೊತೆ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, "ಕಳೆದ ವಾರ ನೆರಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಇಂದು ಕೂಡ ಮಳೆ ಹಾನಿಯ ಕೆಲ ಭಾಗಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ. ಕಾಂಗ್ರೆಸ್ ಬಂದರೆ ಬರಗಾಲ ಬರುತ್ತದೆ ಅಂತಿದ್ದರು. ಆದರೆ ಈಗ ಉತ್ತಮ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯ ಭರ್ತಿಯಾಗಿವೆ" ಎಂದರು.
"ಸೊರಬ ತಾಲೂಕಿಗೆ ಈ ಸಲ ಹೊಸ ಯೋಜನೆ ತಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಶಾಶ್ವತ ಪರಿಹಾರಕ್ಕೆ ಕೆಲ ಯೋಜನೆ ರೂಪಿಸಬೇಕಿದೆ. ಜನರ ಸುರಕ್ಷತೆಗೆ ಬೇಕಾದ ಕ್ರಮ ಆಗಬೇಕಿದೆ. ಕೆಲವು ಕಡೆ ಮನೆ ಹಾನಿಯಾಗಿದೆ. ಶಿವಮೊಗ್ಗ ತಾಲೂಕಿನಲ್ಲೇ 100ಕ್ಕೂ ಹೆಚ್ಚು ಮನೆ ಹಾನಿಯಾಗಿವೆ. ಜಿಲ್ಲೆಯ ಎಲ್ಲಾ ಭಾಗದ ಜನರು ಬೆಳೆ ವಿಮೆ ಕಟ್ಟಬೇಕು. ಸರ್ಕಾರದ ಪರಿಹಾರದ ಜೊತೆ ಬೆಳೆ ವಿಮೆ ಪಡೆದುಕೊಳ್ಳಬಹುದು" ಎಂದು ಹೇಳಿದರು.
"ಈ ಹಿಂದೆ ಮಾಡಿರುವ ಯೋಜನೆಗಳಲ್ಲಿ ಕೆಲವು ಕಾನೂನು ತೊಡಗಿದೆ. ಶರಾವತಿ ಸಂತ್ರಸ್ತರಿಗೆ ಸಹಕಾರ ನೀಡುವ ಕೆಲಸ ಆಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಸಂತ್ರಸ್ತರಿಗೆ ಅನ್ಯಾಯ ಆಗಿರುವ ಬಗ್ಗೆ ಸರ್ಕಾರ ಕೇಸು ನಡೆಸಲಿದೆ. ಈಶ್ವರ್ ಖಂಡ್ರೆ ಅವರು ಅರಣ್ಯ ಇಲಾಖೆ ಸಂಬಂಧಿಸಿದಂತೆ ಹೊಸ ಬಿಲ್ ಪಾಸ್ ಮಾಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದರು.
"ವಿರೋಧ ಪಕ್ಷದವರು ನೀರಿಲ್ಲದ ಬಾವಿಗೆ ಬಂದು ಬೀಳೋದು ಸರಿಯಲ್ಲ. ವಿಧಾನಸಭೆಯಲ್ಲಿ ಕಲಾಪ ನಡೆಯಲು ವಿರೋಧ ಪಕ್ಷದವರು ಬಿಟ್ಟಿಲ್ಲ. ಪದೇ ಪದೇ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅವರ ನಡೆ ಸರಿಯಲ್ಲ. ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು" ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಜುಲೈ 21ರ ತನಕದ ಮಾಹಿತಿ ಪ್ರಕಾರ ಸರಾಸರಿ 529.0 ಮಿ. ಮೀ. ವಾಡಿಕೆ ಮಳೆಗೆ 831 ಮಿ. ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ. 57ರಷ್ಟು ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾಡಳಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.












Click it and Unblock the Notifications