BY Vijayendra: ಶಿಕಾರಿಪುರದಲ್ಲಿ ತನ್ನ ಗೆಲುವಿನ ಅಂತರ ತಿಳಿಸಿದ ಬಿವೈ ವಿಜಯೇಂದ್ರ
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗಿದ್ದು, ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ಪಕ್ಷಗಳು ಸತತ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರೂ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಸಮಾವೇಶ ಹಾಗೂ ರೋಡ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ಮತದಾರರ ಮನಗೆಲ್ಲಲು ಹಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ ಬಿಜೆಪಿ ಪಕ್ಷದ ಪರ ಕಣಕ್ಕಿಳಿದಿದ್ದಾರೆ. ಇದೇ ವೇಳೆ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣದ ಮಾತೂ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ವೈ. ವಿಜಯೇಂದ್ರ, "ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ದಾರುಣ ಪರಿಸ್ಥಿತಿ ನನಗಾಗಲಿ, ನಮ್ಮ ತಂದೆಯವರಿಗಾಗಲಿ ಹಾಗೂ ನಮ್ಮ ಕುಟುಂಬದವರಿಗಾಗಲಿ ಬಂದಿಲ್ಲ," ಎಂದು ಹೇಳಿದ್ದಾರೆ.
ಶಿವಮೊಗ್ಗದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ""2004ರ ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿಯೆಂಬುದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಸ್ವಾಭಿಮಾನಿ ಮತದಾರರು 46 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿ.ಎಸ್. ಯಡಿಯೂರಪ್ಪರನ್ನು ಗೆಲ್ಲಿಸಿದ್ದರು. ನಾನು ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ,'' ಎಂದು ತಿಳಿಸಿದರು.

"ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಅಣ್ಣ ಬಿ.ವೈ. ರಾಘವೇಂದ್ರ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಇಡೀ ಕ್ಯಾಬಿನೆಟ್ ಶಿಕಾರಿಪುರಕ್ಕೆ ಬಂದು ತಾಲೂಕಿನಾದ್ಯಂತ ಪ್ರಚಾರ ಮಾಡಿತ್ತು. ಶಿಕಾರಿಪುರದಲ್ಲಿ ಹಣ, ಮದ್ಯದ ಹೊಳೆಯನ್ನೇ ಹರಿಸಲಾಗಿತ್ತು".
"ಆದರೆ, ಜನ ಅದ್ಯಾವುದಕ್ಕೂ ಬೆಲೆ ಕೊಡದೆ ಕ್ಷೇತ್ರದ ಮತದಾರರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದರು. ಹೀಗಾಗಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ," ಎಂದು ಹೇಳಿದ್ದಾರೆ.
"ಈವರೆಗೆ ಬಿ.ಎಸ್. ಯಡಿಯೂರಪ್ಪನವರ ಕರ್ಮಭೂಮಿಯಾಗಿದ್ದ ಶಿಕಾರಿಪುರ, ಇದೀಗ ನನಗೆ ಜನ್ಮಭೂಮಿಯೂ ಹೌದು. ಇನ್ನು ನಾನು ಇದನ್ನು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ. ಶಿಕಾರಿಪುರದಲ್ಲಿ ಎಲ್ಲಾ ಬೂತ್‌ಗಳಿಗೆ ಈಗಾಗಲೇ 3 ಬಾರಿ ಭೇಟಿ ಕೊಟ್ಟು ಮತಯಾಚಿಸಿದ್ದೇನೆ," ಎಂದರು.
"ಬಿಜೆಪಿ ಕಾರ್ಯಕರ್ತರು ಉತ್ಸಾಹಭರಿತರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ. ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ನನ್ನ ಗೆಲುವು ಸುಲಭವಾಗಿದೆ," ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಜಾರ ಸಮುದಾಯದ ಮೀಸಲಾತಿ ವಿಷಯವನ್ನು ಇಟ್ಟುಕೊಂಡು ಕೆಲವರು ಸಮಾಜದಲ್ಲಿ ಒಡಕು ಸೃಷ್ಟಿಸಲು ಯತ್ನಿಸಿದರು. ಬಿ.ಎಸ್. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದ್ದೇಶ ಈಡೇರಲಿಲ್ಲ. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯಲ್ಲಿಲ್ಲ. ಬಂಜಾರರು ಬಿಜೆಪಿ ಪರವಿದ್ದಾರೆ ಎಂದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications