ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಮುಹೂರ್ತ ನಿಗದಿ

ಶಿವಮೊಗ್ಗ, ಜೂನ್ 12; ಈಗಾಗಲೇ ಲೋಕಾರ್ಪಣೆಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಮೂಲಕ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಮಲೆನಾಡಿನ ಜನರ ಕನಸು ನನಸಾಗಲಿದೆ.

ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆದರೆ ಇಲ್ಲಿಯ ತನಕ ಪ್ರಯಾಣಿಕ ವಿಮಾನಗಳ ಸಂಚಾರ ಆರಂಭವಾಗಿರಲಿಲ್ಲ.

IndiGo Shivamogga Bengaluru Flight Schedule And Price

ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಡೆಯಲಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಲಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸಹ ಆರಂಭವಾಗಲಿದೆ. ಈ ಮೂಲಕ ಲೋಕಾರ್ಪಣೆಗೊಂಡ ಬಳಿಕ ವಿಮಾನ ನಿಲ್ದಾಣ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ದರ, ವೇಳಾಪಟ್ಟಿ; ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಮನೋಜ್ ಪ್ರಭು ವಿಮಾನ ಹಾರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. "ಆಗಸ್ಟ್‌ 11ರಂದು ಶಿವಮೊಗ್ಗದ ಸೊಗಾನೆ ವಿಮಾನ ನಿಲ್ದಾಣದಿಂದ ಸಂಸ್ಥೆಯ ಮೊದಲ ವಿಮಾನ ಬೆಂಗಳೂರಿಗೆ ಹಾರಾಟ ನಡೆಸಲಿದೆ" ಎಂದು ಹೇಳಿದ್ದಾರೆ.

ವಿಮಾನ ಪ್ರತಿದಿನ ಬೆಳಗ್ಗೆ 9ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ 1.30ಕ್ಕೆ ಬೆಂಗಳೂರು ತಲುಪಲಿದೆ.

ಸದ್ಯ ಇಂಡಿಗೋ ಸಂಸ್ಥೆ ಬೆಂಗಳೂರು-ಶಿವಮೊಗ್ಗ ನಡುವೆ ಒಂದು ವಿಮಾನವನ್ನು ಮಾತ್ರ ಓಡಿಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಂಗಳೂರು-ಶಿವಮೊಗ್ಗ ಮಾರ್ಗಕ್ಕೆ 2,500 ರಿಂದ 3,500 ರೂ. ತನಕ ದರ ಆಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಇಂಡಿಗೋ ವೆಬ್‌ಸೈಟ್‌ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆದರೆ ಪ್ರಯಾಣಿಕರ ವಿಮಾನ ಹಾರಾಟ ಎಂದಿನಿಂದ ಎಂದು ಜನರು ಪ್ರಶ್ನಿಸುತ್ತಿದ್ದರು. ಸದ್ಯ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಪರ್ಕ ಆರಂಭವಾಗಲಿದೆ.

ಶಿವಮೊಗ್ಗದಿಂದ 11 ನಗರಗಳಿಗೆ ವಿಮಾನ ಸೇವೆ ಲಭ್ಯವಾಗಲಿದೆ ಎಂಬ ಮಾಹಿತಿ ಇತ್ತು. ಮಳೆಗಾಲ ಮುಗಿದ ಬಳಿಕ ವಿಮಾನಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಶಿವಮೊಗ್ಗ-ಬೆಂಗಳೂರು ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಬಂದರೆ ಇಂಡಿಗೋ ಸಂಸ್ಥೆಯೇ ಇನ್ನೊಂದು ವಿಮಾನ ಹಾರಾಟ ಆರಂಭಿಸುವ ಸಾಧ್ಯತೆ ಇದೆ.

ಮಾರ್ಚ್ 29ರಂದು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಪ್ರಕಟಗೊಂಡಿತ್ತು. ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈಗ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ದಿನಾಂಕ ನಿಗದಿಯಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು. ಸೊಗಾನೆಯ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು 2022ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ 2023ರ ಫೆಬ್ರವರಿಗೆ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತು.

ಮೊದಲು ಶಿವಮೊಗ್ಗದಲ್ಲಿ 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರ್‌ಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿತ್ತು. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಒಳಪಡಿಸುವ ಕುರಿತು ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣದಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ಶಾಸಕರ ಪೋಸ್ಟ್; ಶಿವಮೊಗ್ಗ ನಗರದ ಶಾಸಕ ಎಸ್. ಎನ್. ಚನ್ನಬಸಪ್ಪ, 'ಶಿವಮೊಗ್ಗ ಜನತೆಯ ಬಹು ದಿನಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ನನಸಾಗಲಿದೆ. ನಮ್ಮ ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣದಿಂದ ಇದೆ ಆಗಸ್ಟ್ 11 ರಿಂದ IndiGo ಸಂಸ್ಥೆಯ ಮೊದಲ ವಿಮಾನವು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಈ ಮೂಲಕ ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಕನಸನ್ನು ನನಸು ಮಾಡಲು ಯಶಸ್ವಿ ಪಾತ್ರವಹಿಸಿದ BS Yediyurappaನವರಿಗೆ ಹಾಗೂ ಸಂಸದರಾದ BY Raghavendra ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು' ಎಂದು ಪೋಸ್ಟ್ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+