ಮುಂದಿನ ಚುನಾವಣೆಗೆ ಇನ್ನೊಂದು ತಿಂಗಳಲ್ಲಿ ಕ್ಷೇತ್ರ ನಿರ್ಧರಿಸುವೆ : ಸಿದ್ದರಾಮಯ್ಯ
ಶಿವಮೊಗ್ಗ, ಅಕ್ಟೋಬರ್ 30 : ವಿಧಾನಸಭೆ ಚುನಾವಣೆಯಲ್ಲಿ ತಾವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೊಂದು ತಿಂಗಳಲ್ಲಿ ನಿರ್ಧಾರ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಾದಾಮಿ, ವರುಣಾ, ಚಾಮರಾಜನಗರ, ಕೋಲಾರ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ಇದೆ. ವರುಣಾ ಕ್ಷೇತ್ರದಲ್ಲಿ ಮಗ ಯತೀಂದ್ರ ಶಾಸಕರಾಗಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳಲ್ಲಿ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಫೈನಲ್ ಮಾಡುತ್ತೇನೆ ಎಂದು ತಿಳಿಸಿದರು.
ಸ್ವಕ್ಷೇತ್ರ ಬಿಟ್ಟು ಬೇರೆಡೆಗೆ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಬಿಜೆಪಿ ನಾಯಕರ ಟೀಕೆ ಕುರಿತು ಕೇಳಿದ ಪ್ರಶ್ನೆಗೆ, ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು. ಅದನ್ನು ಬೇರೆ ರೀತಿ ಬಿಂಬಿಸುತ್ತೀರಾ. ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ವಿಭಿನ್ನ ವ್ಯಾಖ್ಯಾನವೇಕೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಧರ್ಮ ಸಂಘರ್ಷ, ದ್ವೇಷ ರಾಜಕಾರಣ ಹೆಚ್ಚಾಗಿದೆ. ಧರ್ಮ ಸಂಘರ್ಷ ಹೆಚ್ಚಾದರೆ ಮನಸುಗಳು ಒಡೆದು ಹೋಗುತ್ತವೆ. ಆರ್.ಎಸ್.ಎಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಲು ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಿಜೆಪಿಯವರು ಸಹಜ ಸಾವಿಗು ಜಾತಿ, ಧರ್ಮದ ಲೇಪನ ಮಾಡುತ್ತಿದ್ದಾರೆ. ಪರೇಶ್ ಮೇಸ್ತಾ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಬಿಜೆಪಿಯ ಪ್ರಧಾನಿ, ಅವರದ್ದೇ ಗೃಹಸಚಿವರು ಇದ್ದಾಗ ತಾನು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಅದು ಕೊಲೆಯಲ್ಲ ಆಕಸ್ಮಿಕ ಸಾವು ಎಂದು ವರದಿ ಬಂದಿದೆ. ಈಗ ಸಿದ್ದರಾಮಯ್ಯ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. 2008ರಿಂದ ಈಚೆಗೆ ಬಿಜೆಪಿ ಒಂದೆ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿಲ್ಲ ಎಂದರು.
ರಾಹುಲ್ ಗಾಂಧಿ ವ್ಯಕ್ತಿತ್ವ ಜನರಿಗೆ ಗೊತ್ತಾಗಿದೆ
ಭಾರತ್ ಜೋಡೋ ಯಾತ್ರೆಗೆ ದೇಶದಲ್ಲಿ ನಿರೀಕ್ಷೆಗೂ ಮೀರಿ ಜನ ಸ್ಪಂದನೆ ಸಿಗುತ್ತಿದೆ. 3570 ಕಿ.ಮೀ ಪಾದಯಾತ್ರೆ ಸುಲಭದ್ದಲ್ಲ. ಬಿಜೆಪಿಯುವರು ರಾಹುಲ್ ಗಾಂಧಿ ಅವರ ವ್ಯಕ್ತಿತ್ವದ ಕುರಿತು ಅಪಪ್ರಚಾರ ಮಾಡಿದ್ದರು. ಆದರೆ ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಅವರ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಜನರಿಗೆ ಗೊತ್ತಾಗಿದೆ. ಜನಪರ ಕಾಳಜಿ, ಬದ್ಧತೆ ಇದ್ದರಷ್ಟೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಗಲಾಟೆ ಮಾಡಿಸುತ್ತಿರುವುದೇ ಈಶ್ವರಪ್ಪ
ಶಿವಮೊಗ್ಗದಲ್ಲಿ ಪದೇ ಪದೆ ಗಲಾಟೆಗಳ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಗಲಾಟೆ ಮಾಡಿಸುತ್ತಿರುವುದೇ ಈಶ್ವರಪ್ಪ. ಜನರನ್ನು ಎತ್ತಿ ಕಟ್ಟೋದು, ಹೆಣ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಮಂತ್ರಿಯಾಗಿದ್ದಾಗ ಈಶ್ವರಪ್ಪ ಅವರು 144 ಸೆಕ್ಷನ್ ಜಾರಿಯಾದಾಗ ಹರ್ಷನ ಶವಯಾತ್ರೆ ಮಾಡಿದ್ದರು ಎಂದು ಟೀಕಿಸಿದರು.












Click it and Unblock the Notifications