ಬಿಎಸ್‌ವೈ ವಿರುದ್ಧದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ತಡೆ
ಶಿವಮೊಗ್ಗ, ಮಾರ್ಚ್ 16 : ಗೃಹ ಮಂಡಳಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ವಿರುದ್ಧ ನಡೆಯುತ್ತಿದ್ದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ವಿಚಾರಣೆಗೆ ಮಾರ್ಚ್ 18ರಂದು ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಲಾಗಿತ್ತು.
2012ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವಕೀಲ ವಿನೋದ್ ಅವರು ಶಿವಮೊಗ್ಗದ ಲೋಕಾಯುಕ್ತ ನ್ಯಾಯಾಲಯದಲ್ಲಿ ಯಡಿಯೂರಪ್ಪ ಮತ್ತು ಇತರ 6 ಜನರ ವಿರುದ್ಧ ನಿವೇಶನ ಪಡೆದ ಕುರಿತು ದೂರು ದಾಖಲಿಸಿದ್ದರು. ಕೋರ್ಟ್ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು. [ಯಡಿಯೂರಪ್ಪಗೆ ಕೋರ್ಟ್ ನಿಂದ ಸಮನ್ಸ್]

ಬಿ ರಿಪೋರ್ಟ್ ತಿರಸ್ಕಾರ : ಈ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಇದನ್ನು ಪ್ರಶ್ನಿಸಿ ವಕೀಲ ವಿನೋದ್ ಅವರು ಮೇಲ್ಮನವಿ ಸಲ್ಲಿಸಿದ್ದರು. 2016ರ ಫೆಬ್ರವರಿ 17ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಿ ರಿಪೋರ್ಟ್ ತಿರಸ್ಕರಿಸಿತ್ತು. [16ನೇ FIR ರದ್ದುಗೊಳಿಸಲು ಯಡಿಯೂರಪ್ಪ ಮನವಿ]
ಪ್ರಕರಣದ ಆರೋಪಿಗಳಾದ ಯಡಿಯೂರಪ್ಪ, ಯಡಿಯೂರಪ್ಪ ಪುತ್ರ ಅರುಣಾ ದೇವಿ, ಸಂದೇಶ್ ಗೌಡ, ಶಿವಶಂಕರ್, ಮಂಜುನಾಥ್, ಕೃಷ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು ಮತ್ತು ಮಾರ್ಚ್ 18ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. [FIR ರದ್ದಾದರೂ ಕಾನೂನು ಹೋರಾಟ ಮುಗಿದಿಲ್ಲ]
ತಡೆಯಾಜ್ಞೆ ನೀಡಿದ ಕೋರ್ಟ್ : ವಿಚಾರಣೆಗೆ ಹಾಜರಾಗುವಂತೆ ನೀಡಿದ ಸಮನ್ಸ್ ರದ್ದುಗೊಳಿಸಬೇಕು ಮತ್ತು ತನಿಖೆಗೆ ತಡೆ ನೀಡಬೇಕು ಎಂದು ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ.
ಏನಿದು ಪ್ರಕರಣ? : ಕರ್ನಾಟಕ ಗೃಹ ಮಂಡಳಿ ವಿನೋಬನಗರದ ಕಲ್ಲಹಳ್ಳಿ ಬಳಿ ಬಡಾವಣೆ ಅಭಿವೃದ್ಧಿಪಡಿಸಿತ್ತು. ಈ ಬಡಾವಣೆಯಲ್ಲಿ 4 ನಿವೇಶನಗಳನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ನೀಡುವಂತೆ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಗಳಾಗಿದ್ದಾಗ ಶಿಫಾರಸು ಮಾಡಿದ್ದರು.
ಶಿಫಾರಸಿನ ಅನ್ವಯ ಗೃಹ ಮಂಡಳಿ ನಿವೇಶನ ನೀಡಿತ್ತು. ಆದರೆ, ನಂತರ 4 ನಿವೇಶನಗಳನ್ನು ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಅವರ ಹೆಸರಿಗೆ ನೋಂದಣಿ ಮಾಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲ ವಿನೋದ್ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.












Click it and Unblock the Notifications