ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಾಹನ ಸಂಚಾರ ಮಾರ್ಗ ಬದಲಾವಣೆ
ಶಿವಮೊಗ್ಗ, ಸೆಪ್ಟೆಂಬರ್, 08: ಶಿವಮೊಗ್ಗದಲ್ಲಿ ಸೆಪ್ಟೆಂಬರ್ 9 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆ ನಗರದಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ಸೆಪ್ಟೆಂಬರ್ 9ರಂದು ಬೆಳಗ್ಗೆ ಕೋಟೆ ಶ್ರೀಭೀಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭ ಆಗಲಿದೆ. ಎಸ್‍ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಶಿವಪ್ಪ ನಾಯಕ ಸರ್ಕಲ್, ಬಿ.ಹೆಚ್.ರಸ್ತೆ, ಎ.ಎ. ಸರ್ಕಲ್, ನೆಹರು ರಸ್ತೆ ಮುಖಾಂತರ ಮೆರವಣಿಗೆ ಸಾಗಲಿದೆ.
ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆ, ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ, ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯರಸ್ತೆ, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆ, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನ ತಲುಪಲಿದೆ. ಬಳಿಕ ತುಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಸುಗಮ ಸಂಚಾರಕ್ಕೆ ವ್ಯವಸ್ಥೆ
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ವಾಹನಗಳ ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
1. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಲಾಗಿದೆ.
2. ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಭಾರಿ ವಾಹನ, ಬಸ್‍ಗಳು ಮತ್ತು ಎಲ್ಲಾ ನಗರದ ಬಸ್‍ಗಳು ಹಾಗೂ ಕಾರುಗಳು ಎಂಆರ್‌ಎಸ್ ಸರ್ಕಲ್, ಬೈಪಾಸ್ ರಸ್ತೆ ಮುಖಾಂತರ ತೆರಳಬೇಕು.
3. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಹೊಳೆಹೊನ್ನೂರು ಸರ್ಕಲ್, ಎಂಆರ್‌ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ತೆರಳಬೇಕು.
4. ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಕ್ರಾಸ್, ಎಂಆರ್‌ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗಬೇಕು.
5. ಕೋಟೆ ರಸ್ತೆ ಮತ್ತು ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
6. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಶಿಕಾರಿಪುರ, ಸೊರಬ ಕಡೆ ಹೋಗುವ ಎಲ್ಲಾ ಬಸ್‍ಗಳು ಮತ್ತು ಭಾರಿ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್ - ಆಲ್ಕೊಳ ಸರ್ಕಲ್ -ಪೊಲೀಸ್ ಚೌಕಿ - ರಾಜ್‍ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮುಖಾಂತರ ಸವಳಂಗ ರಸ್ತೆಗೆ ಹೋಗಬೇಕು.
7. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂಆರ್‌ಎಸ್ ಸರ್ಕಲ್ ಕಡೆಗೆ ಹೋಗಬೇಕು.
8. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೆರವಣಿಗೆ ಸಾಗುವ ಹಾದಿಯಲ್ಲಿ ರೂಟ್ ಮಾರ್ಚ್
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗದಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಕೋಟೆ ರಸ್ತೆಯಿಂದ ಆರಂಭವಾದ ರೂಟ್ ಮಾರ್ಚ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮೂಲಕ ಸಾಗಿತು. ಶಿವಪ್ಪ ನಾಯಕ ಸರ್ಕಲ್, ಎಎ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಕುವೆಂಪು ರಸ್ತೆ ಮಾರ್ಗವಾಗಿ ರೂಟ್ ಮಾರ್ಚ್ ನಡೆಸಲಾಯಿತು.
ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್
ಆರ್.ಎ.ಎಫ್ ಪಡೆ, ಪೊಲೀಸ್ ಸಿಬ್ಬಂದಿ ರೂಟ್ ಮಾರ್ಚ್‌ನಲ್ಲಿ ಭಾಗವಹಿಸಿದ್ದರು. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ನಗರದಲ್ಲಿ ಬಂದೋಬಸ್ತ್ ಕ್ರಮ ಕೈಗೊಳ್ಳಾಲಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಂದತೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications