ಶಿವಮೊಗ್ಗ; ಮನೆ ಬಾಗಿಲಿಗೆ ಬರಲಿದೆ ಜನನ, ಮರಣ ಪ್ರಮಾಣ ಪತ್ರ
ಶಿವಮೊಗ್ಗ, ಆಗಸ್ಟ್ 06; ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಜನರ ಮನೆ ಬಾಗಿಲಿಗೆ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿದೆ.
ಅಂಚೆಯಣ್ಣನ ಮೂಲಕ ಮನೆ ಬಾಗಿಲಿಗೆ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ತಲುಪಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಿದೆ. ಇದರಿಂದಾಗಿ ಪ್ರಮಾಣ ಪತ್ರವನ್ನು ಪಡೆಯಲು ಜನರು ವಿವಿಧ ಕಛೇರಿಗಳಿಗೆ ಅಲೆದಾಟ ನಡೆಸುವುದಕ್ಕೆ ತಡೆ ಬಿದ್ದಿದೆ.

ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ಅಂಚೆಯಣ್ಣನ ಮೂಲಕ ತಲುಪಿಸುವ ವಿಶಿಷ್ಟ ಸೇವೆಯನ್ನು ಶಿವಮೊಗ್ಗ ಅಂಚೆ ವಿಭಾಗದಲ್ಲಿ ಪರಿಚಯಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಜಂಟಿಯಾಗಿ ಈ ವಿಶಿಷ್ಟ ಸೇವೆಗೆ ಚಾಲನೆ ನೀಡಿವೆ.
ಎಷ್ಟು ಹಣ ಪಾವತಿಸಬೇಕು?; ಶಿವಮೊಗ್ಗ ಮಹಾನಗರ ಪಾಲಿಕೆ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಮನೆಯ ಬಾಗಿಲಿಲ್ಲಿ ಪಡೆಯುವುದು ಹೇಗೆ? ಎಂದು ಮಾಹಿತಿ ನೀಡಿದೆ. ಇದಕ್ಕಾಗಿ ನಿಗದಿ ಮಾಡಿರುವ ಶುಲ್ಕವನ್ನು ಪಾವತಿ ಮಾಡಿ ಪ್ರಮಾಣ ಪತ್ರವನ್ನು ಜನರು ಸುಲಭವಾಗಿ ಮನೆ ಬಾಗಿಲಲ್ಲಿಯೇ ಪಡೆಯಬಹುದಾಗಿದೆ.
ಜನನ ಅಥವ ಮರಣದ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿನಲ್ಲಿ ಪಡೆಯಲು ಮಹಾನಗರ ಪಾಲಿಕೆ ಜನನ/ ಮರಣ ಕೌಂಟರ್‌ನಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು, ನಿಮ್ಮ ವಿಳಾಸವನ್ನು ನಮೂದಿಸಿ ಕೋರಿಕೆಯನ್ನು ಸಲ್ಲಿಸಬೇಕು.
ಪ್ರಮಾಣ ಪತ್ರವನ್ನು ಭಾರತೀಯ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ವಿಳಾಸದಾರರು ಪ್ರಮಾಣ ಪತ್ರವನ್ನು ಪಡೆಯುವ ಸಮಯದಲ್ಲಿ ರೂ. 80 ಶುಲ್ಕವನ್ನು ಪಾವತಿಸಬೇಕು.
ಜನರು ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯಲು ಅನುಕೂಲವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ. ಜಿ. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಗತ್ಯವಾದ ದಾಖಲೆ; ಪ್ರತಿಯೊಬ್ಬ ವ್ಯಕ್ತಿಯ ಜನನ ಮತ್ತು ಮರಣವನ್ನು ಪ್ರಮಾಣೀಕರಿಸುವ ಇದು ಅತ್ಯಂತ ಮಹತ್ವದ ದಾಖಲೆಯಾಗಿದೆ. ವಿದ್ಯಾಭ್ಯಾಸ, ಉದ್ಯೋಗ, ವಿಮೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿಯೂ ಜೀವಂತವಿರುವಾಗಲೂ ಮತ್ತು ಮರಣದ ನಂತರ ಆತನ ಕುಟುಂಬಕ್ಕೂ ಈ ದಾಖಲೆಗಳು ಅಗತ್ಯವಾಗಿವೆ.
ಹಲವು ಸಂದರ್ಭದಲ್ಲಿ ಜನನ, ಮರಣ ಪ್ರಮಾಣ ಪತ್ರಕ್ಕಾಗಿ ನಿಗದಿತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೂ ಸಹ ತಾಂತ್ರಿಕ ಕಾರಣಗಳಿಂದ ಪ್ರಮಾಣಪತ್ರವನ್ನು ಸರಿಯಾದ ಸಮಯದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಇದಕ್ಕಾಗಿ ಕಛೇರಿಗಳಿಗೆ ಅಲೆದಾಟ ನಡೆಸಬೇಕಾಗುತ್ತದೆ. ಇದಕ್ಕಾಗಿ ಸರಳ ವ್ಯವಸ್ಥೆಯನ್ನು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಇದೇ ವ್ಯವಸ್ಥೆ ಮಾಡಲಾಗಿದೆ. ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಯ ಮೂಲಕ, ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಮತ್ತು ಜಿಲ್ಲೆಯಲ್ಲಿ ಇತರೇ ಕಾರಣಗಳಿಂದ ಮರಣ ಹೊಂದಿದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕುಟುಂಬದ ಮನೆ ಬಾಗಲಿಗೆ ಮರಣ ಪ್ರಮಾಣ ಪತ್ರವನ್ನು ಅಂಚೆ ಮೂಲಕ ತಲುಪಿಸುವ ವ್ಯವಸ್ಥೆ ಕಳೆದ ತಿಂಗಳು ಜಾರಿಗೆ ಬಂದಿದೆ.
ವ್ಯಕ್ತಿಯು ಮೃತಪಟ್ಟಾಗ ಕುಟುಂಬದವರು ಮರಣಪ್ರಮಾಣ ಪತ್ರ ಕೋರಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಅರ್ಜಿ ನಮೂನೆಯಲ್ಲಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಇದಕ್ಕಾಗಿ ನಿಗದಿಪಡಿಸಿರುವ ಶುಲ್ಕ ರೂ. 80 ಅನ್ನು ಪಾವತಿ ಮಾಡಬೇಕು. ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿರುವ ಮೃತರ ಕುಟುಂಬಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣಪತ್ರವನ್ನು ತಲುಪಿಸಲಾಗುತ್ತದೆ ಎಂದು ಉಡುಪಿ ಜಲ್ಲಾಡಳಿತ ಹೇಳಿದೆ.
ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರದ ಸ್ಥಳೀಯ ಜನನ ಮರಣ ನೋಂದಣಿ ಪ್ರಾಧಿಕಾರವಾದ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಗಳು ಈ ಸೇವೆ ಒದಗಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ನಗರಸಭೆಯಿಂದ ದಾಖಲೆಗಳನ್ನು ಸಂಗ್ರಹಿಸಲು ಅಂಚೆ ಇಲಾಖೆಯಿಂದ ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.











Click it and Unblock the Notifications