ಶಿವಮೊಗ್ಗ : 300 ಸಿಲಿಂಡರ್ ಸ್ಫೋಟ, 17 ಲಕ್ಷ ನಷ್ಟ
ಶಿವಮೊಗ್ಗ, ಅ.21 : ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯಲ್ಲಿ ಅನಿಲ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡು, 300 ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್ ನಲ್ಲಿ ನಡೆದಿದೆ. ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದಾಗಿ 17 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ.
ಸೋಮವಾರ ಸಂಜೆ ಸುಮಾರು 300 ಸಿಲಿಂಡರ್ ಹೊತ್ತು ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಹಾವೇರಿಗೆ ಸಾಗುತ್ತಿದ್ದ ಲಾರಿಗೆ ಹುಲಿಕಲ್ ಘಾಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಲಾರಿಯ ಚಾಲಕ ಮತ್ತು ಕ್ಲೀನರ್ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಲಾರಿಯಲ್ಲಿದ್ದ ಒಂದೊಂದು ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

ಹುಲಿಕಲ್ ಘಾಟ್ ಮಧ್ಯಪ್ರದೇಶದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಆದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲಿ. ಕುಂದಾಪುರ ಮತ್ತು ತೀರ್ಥಹಳ್ಳಿಯ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಸತತವಾಗಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು.
ಲಾರಿ ಚಾಲಕ ಮತ್ತು ಕ್ಲೀನರ್ ದೂರ ಓಡಿಹೋಗಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಗಿಲಿಗೆಗೆ ಸಿಲುಕಿ ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. 3 ಸಿಲಿಂಡರ್ ಸ್ಫೋಟಗೊಂಡಿರುವುದರಿಂದ ಏಳು ಲಕ್ಷ ರೂ.ನಷ್ಟ ಸಂಭವಿಸಿದೆ. ಲಾರಿಯ ಮೌಲ್ಯ ಹತ್ತು ಲಕ್ಷವಾಗಿದ್ದು, ಒಟ್ಟಾರೆ ಅಗ್ನಿ ಆಕಸ್ಮಿಕದಿಂದಾಗಿ 17 ಲಕ್ಷ ನಷ್ಟ ಉಂಟಾಗಿದೆ.
ಸಿಲಿಂಡರ್ ಲಾರಿ ಸ್ಪೋಟಗೊಂಡಿದ್ದರಿಂದ ಉಡುಪಿ-ಶಿಮವೊಗ್ಗ ಹೆದ್ದಾರಿ ಸಂಚಾರವನ್ನು ಐದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಂಕಿ ಸಂಪುರ್ಣವಾಗಿ ನಂದಿಸಿದ ಬಳಿಕ ಮಾರ್ಗದಲ್ಲಿ ವಾಹನ ಸಂಚಾರ ಆರಂಭಿಸಲಾಗಿದೆ.












Click it and Unblock the Notifications