ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆ, ಅನುದಾನ ಬಿಡುಗಡೆ
ಶಿವಮೊಗ್ಗ, ಏಪ್ರಿಲ್ 30: ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಯೋಜನೆ ಕುರಿತು ಅಪ್‌ಡೇಟ್ ಸಿಕ್ಕಿದೆ. ಈ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್. ಎಸ್. ಬೋಸರಾಜು ಅನುದಾನ ಬಿಡುಗಡೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಚಿವರು ಖುದ್ದು ಭೇಟಿ ನೀಡಿದ್ದರು.
ಹೊಳಲೂರು ಏತ ನೀರಾವರಿ ಯೋಜನೆಯ ಪುನಶ್ಚೇತನಕ್ಕೆ 4.8 ಕೋಟಿ ರೂ ನಿಗದಿ ಮಾಡಲಾಗಿದ್ದು, ಅನುದಾನ ಬಿಡುಗಡೆ ಮಾಡಲಾಗಿದೆ. ಈ ಭಾಗದ ರೈತರ ಬಹುದಿನಗಳ ಕನಸು ನನಸು ಮಾಡಿದ ಸಚಿವ ಎನ್. ಎಸ್. ಬೋಸರಾಜು ಅವರಿಗೆ ರೈತರು ಅಭಿನಂದನೆ ಸಲ್ಲಿಸಿದ್ದಾರೆ. ಬಹುದಿನಗಳಿಂದ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಸಚಿವರು ನೀಡಿದ್ದ ಭರವಸೆಯಂತೆ ಈಗ ಅನುದಾನ ಬಿಡುಗಡೆಯಾಗಿದೆ.

ಸಚಿವರು ಈಗ 4.80 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹೊಳಲೂರು ಸಮೀಪದಲ್ಲಿ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ, ನಾರಾಯಣ ಕೆರೆ, ಸೀಗೆಹಳ್ಳಿ, ಬೂದಿಗೆರೆ ಕೆರೆ, ಸುತ್ತುಕೋಟೆ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರು ಹರಿಸುವುದು ಯೋಜನೆಯಾಗಿದೆ. ಆದರೆ ಹಲವು ವರ್ಷಗಳಿಂದ ಈ ಯೋಜನೆ ಯಾವುದೇ ಪ್ರಗತಿ ಕಂಡಿರಲಿಲ್ಲ.
ನೀರೆತ್ತುವ ವ್ಯವಸ್ಥೆಯನ್ನು ದುರಸ್ತಿ, ನವೀಕರಣಗೊಳಿಸುವ, ಪಂಪ್ ಮೋಟಾರ್‌ಗಳ ರಿಪೇರಿ, ಹರಮಘಟ್ಟ ಕೆರೆ ಪಾತ್ರದ ಹೊಸ ಪ್ರದೇಶಗಳಿಗೆ ಮೋಟಾರು ಪರಿಕರಗಳನ್ನು ಸಾಗಿಸುವ, ಸೀಗೆ ಕೆರೆ ಬಳಿ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವರು ಈಗ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸೊರಬಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಮಾರ್ಚ್ 8ರಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಸ್ಥಳ ಪರಿಶೀಲನೆ ಮಾಡಿದ್ದರು. ಇದಾದ ಒಂದೂವರೆ ತಿಂಗಳಲ್ಲಿ ಪುನಃಶ್ಚೇತನ ಕಾಮಗಾರಿಗೆ ಅನುದಾನ ನೀಡುವ ಮೂಲಕ ಚಾಲನೆ ಕೊಟ್ಟಿದ್ದಾರೆ.
ಸಚಿವ ಎನ್. ಎಸ್. ಬೋಸರಾಜು ಸ್ವತಃ ಮುತುವರ್ಜಿ ವಹಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ಜಾರಿ ಮಾಡಿರುವುದಕ್ಕೆ ಕೊಮ್ಮನಹಾಳು, ಹರಮಗಟ್ಟೆ ಸೋಮಿನ ಕೊಪ್ಪ ಮತ್ತಿತರೆ ಗ್ರಾಮಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ದುರಸ್ತಿಗಾಗಿ ಪ್ರಯತ್ನ ನಡೆಸಿದ್ದೇವು. ಬೆಂಗಳೂರಿಗೆ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಸಚಿವರು ಬೇರೆಯವಂತೆ ಆಶ್ವಾಸನೆ ನೀಡಿಲ್ಲ. ನೀಡಿದ ವಾಗ್ದಾನದಂತೆ ತ್ವರಿತವಾಗಿ ಸ್ಪಂದಿಸಿದ್ದಾರೆ ಎಂದು ರೈತರು ಹೇಳಿದ್ದಾರೆ.
ಸಚಿವರು ಕೊಟ್ಟ ಭರವಸೆ ಏನು?; ಮಾರ್ಚ್ ತಿಂಗಳಿನಲ್ಲಿ ಸಚಿವ ಎನ್. ಎಸ್. ಬೋಸರಾಜು ಸ್ಥಳೀಯ ಜನಪ್ರತಿನಿಧಿಗಳ ಜೊತೆ ಹೊಳಲೂರು ಏತ ನೀರಾವರಿ ಯೋಜನೆಯ ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಹಾಗೂ ಸ್ಥಳೀಯ ಮುಖಂಡರ ಜೊತೆ ಅಪೂರ್ಣಗೊಂಡಿರುವ ಹಾಗೂ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಯ ಪ್ರಾಥಮಿಕ ಮಾಹಿತಿಯನ್ನು ಪಡೆದಿದ್ದರು.
2008ರಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಸರ್ಕಾರ ಸುಮಾರು 21 ಕೋಟಿ ರೂ.ಗಳಿಗೆ ಅಧಿಕ ಮೊತ್ತ ವ್ಯಯ ಮಾಡಿತ್ತು. ಸಚಿವರು ಸ್ಥಗಿತಗೊಂಡ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದ್ದರು. ಹೊಳಲೂರಿನ ಪಂಪ್ ಹೌಸ್‌ನಲ್ಲಿ ಮೂರು ಮೋಟಾರುಗಳು ಸಕ್ರಿಯವಾಗಿದ್ದು ಅದರಲ್ಲಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತಿವೆ. ಒಂದನ್ನು ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ಊರೊಳಗೆ ಹಾಗೂ ಚಾನಲ್ ಸಮೀಪದಲ್ಲಿರುವ ಶಾಲೆಗೆ ನುಗ್ಗಿ ತೀವ್ರ ತರಹದ ಅಡಚಣೆ ಉಂಟು ಮಾಡುತ್ತಿದೆ ಎಂದು ಸ್ಥಳೀಯರು ಸಚಿವರ ಗಮನ ಸೆಳೆದಿದ್ದರು.
ಪಂಪ್ ಹೌಸ್‌ನಿಂದ ಮೇಲೆತ್ತುವ ನೀರು ನಿರೀಕ್ಷೆಯಂತೆ ಸಣ್ಣ ಕೆರೆಗಳಿಗೆ ತಲುಪದಿರುವ ಬಗ್ಗೆ ಸಾರ್ವಜನಿಕರು ಸಚಿವರ ಗಮನಕ್ಕೆ ತಂದಿದ್ದರು. ಮೊದಲು ಇಲ್ಲಿನ ಒ೦ದು ಸಣ್ಣ ಕೆರೆಗೆ ನೀರನ್ನು ಭರ್ತಿಗೊಳಿಸಿ, ನಂತರ ಅಗತ್ಯತೆಗಳಿಗೆ ಬಳಸಬೇಕು ಎಂಬ ಅಭಿಪ್ರಾಯವನ್ನು ತಿಳಿಸಿದ್ದರು. ಆಗ ಸಚಿವರು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನೀರಾವರಿ ತಜ್ಞರ ಸಲಹೆಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದ್ದರು.












Click it and Unblock the Notifications