ಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ
ಕರ್ನಾಟಕದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾದ ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಪ್ರವಾಸವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನೋಡೆಲ್ ಅಧಿಕಾರಿ ಬ್ರಿಜೇಶ್ ಕುಮಾರ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಅನುಮತಿ ಕೋರಿದ್ದರು. ಐದು ಹೆಕ್ಟೆರ್ ಒಳಗಿನ ಅರಣ್ಯ ಭೂಮಿಯನ್ನು ಪರಿವರ್ತನೆ ಯೋಜನೆಗಳಿಗೆ ಅರಣ್ಯ ಪಡೆ ಮುಖ್ಯಸ್ಥರ ಶಿಫಾರಸ್ಸು ಇಲ್ಲದೆಯೇ ರಾಜ್ಯ ಸರ್ಕಾರಕ್ಕೆ ನೇರವಾಗಿ ಶಿಫಾರಸು ಮಾಡುವ ಅಧಿಕಾರ ನೋಡಲ್ ಅಧಿಕಾರಿಗೆ ಇದೆ ಎಂದು ಅರಣ್ಯ ಕಾಯ್ದೆ ಹೊಸ ತಿದ್ದುಪಡಿ ಹೇಳುತ್ತದೆ. ಹೀಗಾಗಿ ಅರಣ್ಯ ಇಲಾಖೆ ಪಂಚತಾರಾ ಹೋಟೆಲ್ ಹಾಗೂ ರೋಪ್ ವೇಗೆ ಅನುಮತಿ ನೀಡಿದೆ. ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣದಿಂದ ಮರಗಳು, ವನ್ಯ ಜೀವಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಲಾಗಿದೆ.

ಪಶ್ಚಿಮ ಘಟ್ಟದ ಜೋಗ ಜಲಪಾತದ ಬಳಿ ಪರಿಸರ ಪ್ರವಾಸೋದ್ಯಮಕ್ಕಾಗಿ, ಪಂಚತಾರಾ ಹೋಟೆಲ್ ನಿರ್ಮಿಸಲು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರವು ಕರ್ನಾಟಕ ಅರಣ್ಯ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಪರಿಸರ ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಲವಿದ್ಯುತ್ ಯೋಜನೆಗಳು, ಆಣೆಕಟ್ಟುಗಳು, ರಸ್ತೆಗಳು, ರೈಲುಮಾರ್ಗಗಳು ಸೇರಿದಂತೆ ವಿವಿಧ ಸೌಕರ್ಯ ಯೋಜನೆಗಳಿಂದ ಶರಾವತಿ ಕಣಿವೆ ಈಗಾಗಲೇ ಅಪಾಯದಲ್ಲಿದೆ. ಹೀಗಾಗಿ ಈ ಪ್ರದೇಶದಲ್ಲಿ ಹೋಟೆಲ್ ಹಾಗೂ ರೋಪ್ ಗೆ ಅವಕಾಶ ನೀಡಬಾರದು ಎಂದು ಪರಿಸರವಾದಿಗಳು ವಿರೋಧಿಸಿದ್ದರು.

ಈ ರುದ್ರರಮಣೀಯ ಜಲಪಾತ ಮಳೆಗಾಲದಲ್ಲಿ ತನ್ನ ನಿಜವಾದ ಸೌಂದರ್ಯವನ್ನು ಎಲ್ಲೆಡೆ ಹರಡುವ ಮೂಲಕ ದೇಶದ ಹಾಗೂ ವಿದೇಶದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ವಿಶೇಷವಾಗಿ ಪ್ರೇಮಿಗಳು ಈ ಸ್ಥಳಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ. ಅಲ್ಲದೆ ಮಳೆಗಾಲದಲ್ಲಿ ಜಲಪಾತದ ನೋಟವನ್ನು ಕಣ್ತುಂಬಿಕೊಳ್ಳಲು ಕುಟುಂಬದ ಜೊತೆ ಆಗಮಿಸಲು ಜನ ಹೆಚ್ಚು ಆಸಕ್ತಿ ತೋರಿಸುತ್ತಾರೆ.
ದಟ್ಟವಾದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ನೆಲೆಗೊಂಡಿರುವ ಈ ಜಲಪಾತ, ರಾಕೆಟ್, ರೋರರ್, ರಾಜ, ರಾಣಿ ಎಂಬ ವಿಭಾಗಗಳನ್ನು ಸೃಷ್ಟಿಸುವ ಮೂಲಕ ಗಮನಾರ್ಹವಾದ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಈ ಜಲಪಾತದ ವಿಶೇಷ ಅಂದರೆ ಇದು ಬಂಡೆಗಳ ಮೇಲೆ ಹರಿಯದೆ ನೇರವಾಗಿ ಕೆಳಗೆ ಧುಮ್ಮಿಕ್ಕುತ್ತದೆ. ಇದನ್ನು ನೋಡಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಈ ಸ್ಥಳವನ್ನು ಮತ್ತಷ್ಟು ಅಂದವಾಗಿಸಲು ಹಾಗೂ ಪ್ರವಾಸಿಗರಿಗೆ ಅನುಕೂಲವನ್ನು ಒದಗಿಸಿಕೊಡಲು ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಪ್ರವಾಸಿಗರಿಗೆ ಜೋಗ ಜಲಪಾತವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ರೋಪ್ ವೇ ನಿರ್ಮಾಣಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂಬರುವ ವರ್ಷ ನಿರ್ಮಾಣ ಕಾರ್ಯ ಆರಂಭವಾಗಬಹುದು ಎನ್ನಲಾಗುತ್ತಿದೆ.












Click it and Unblock the Notifications