ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಅಗಲೀಕರಣ, ಗುತ್ತಿಗೆದಾರನಿಗೆ ಸಂಕಷ್ಟ
ಶಿವಮೊಗ್ಗ, ಡಿಸೆಂಬರ್ 22 : ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ - 17ರ ಅಗಲೀಕರಣದ ಸಮಯದಲ್ಲಿ ಹಲವು ಮರಳನ್ನು ಕಡಿಯಲಾಗಿದೆ. ನಿಗದಿ ಪಡಿಸಿದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿದೆ. ಬಿದಿರು ನಾಶ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಪರಿಸರವಾದಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಲುವರಾಜು ಅವರು ಶೆಟ್ಟಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಸಮಯದಲ್ಲಿ ಪರಿಸರವಾದಿಗಳು ಮಾಡಿರುವ ಆರೋಪ ಸತ್ಯ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ.
ಸುಮಾರು ಒಂದು ವರ್ಷದಿಂದ ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿಯೂ ಹಾದು ಹೋಗುತ್ತದೆ.
ಮೋರಿಗಳನ್ನು ನಿರ್ಮಾಣ ಮಾಡಲು ಹಲವು ಕಡೆ ರಸ್ತೆಗಳನ್ನು ಅಗೆಯಲಾಗಿದೆ. ಗಾಜನೂರು ಸಮೀಪ ರಸ್ತೆ ಗುಂಡಿಗೆ ಬಿದ್ದು ಮಹೇಶ್ (35) ಎನ್ನುವ ವ್ಯಕ್ತಿ ಮುರು ದಿನಗಳ ಹಿಂದೆ ಮೃತಪಟ್ಟಿದ್ದ.












Click it and Unblock the Notifications