ಶಿವಮೊಗ್ಗ; ಆ. 1ರಿಂದ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ
ಶಿವಮೊಗ್ಗ, ಜುಲೈ 31; ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ವ್ಯವಸ್ಥೆ ಆಗಸ್ಟ್ 1ರಿಂದ ಅನ್ವಯಗೊಳ್ಳುವಂತೆ ಜಾರಿಗೆ ಬರಲಿದೆ. ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಇ-ಆಡಳಿತ ತಂತ್ರಾಂಶವನ್ನು ಸೋಮವಾರ ಲೋಕಾರ್ಪಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನೂತನ ಇ-ಆಡಳಿತ ತಂತ್ರಾಶವನ್ನು ಉದ್ಘಾಟನೆ ಮಾಡಿದರು. ಶಿವಮೊಗ್ಗ ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ತಂತ್ರಾಂಶ ಇ-ಆಡಳಿತಕ್ಕೆ ಸಹಾಯಕವಾಗಲಿವೆ.

ಇ-ಆಡಳಿತ ತಂತ್ರಾಶವನ್ನು ಉದ್ಘಾಟಿಸಿದ ಬಳಿಕ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ವ್ಯವಸ್ಥೆ ಆಗಸ್ಟ್ 1ರಿಂದ ಜಾರಿಗೊಳ್ಳಲಿದೆ ಎಂದು ಹೇಳಿದರು.
ಆಡಳಿತದಲ್ಲಿ ದಕ್ಷತೆ, ಸ್ಥಿರತೆ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಡಾ. ಆರ್. ಸೆಲ್ವಮಣಿ ತಿಳಿಸಿದರು.
ಕಡತಗಳು ವಿಳಂಬವಾಗಲ್ಲ; ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಜಿಲ್ಲೆ ಶಿವಮೊಗ್ಗವಾಗಿದೆ. ಇದರಿಂದಾಗಿ ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೇ ಅವರ ಬೇಡಿಕೆಗಳಿಗನುಗುಣವಾಗಿ ಕಾರ್ಯನಿರ್ವಹಿಸಲು ಇ-ತಂತ್ರಾಂಶ ಸಹಕಾರಿಯಾಗಲಿದೆ.
ಕಡತಗಳ ಅನಗತ್ಯ ವಿಳಂಬವನ್ನು ತಪ್ಪಿಸಿ, ಆಡಳಿತದ ಗುಣಮಟ್ಟವನ್ನು ಸುಧಾರಿಸುವಲ್ಲಿ, ಪಾರದರ್ಶಕತೆ ಕಂಡುಕೊಂಡು ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ಸ್ಥಾಪಿಸಿ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ತಂತ್ರಾಶ ಸಹಕಾರಿಯಾಗಲಿದೆ. ಎಲ್ಲಾ ಅಧಿಕಾರಿಗಳು ಇದರ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ವದ ಉದ್ಧೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ.
ಇ-ಆಫೀಸ್ ಕಚೇರಿ ವ್ಯವಸ್ಥೆಯು ಸರಳೀಕೃತ, ಸ್ಪಂದಿಸುವ, ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಪಾರದರ್ಶಕ ಕೆಲಸವನ್ನು ಸಾಧಿಸುವ ಮಾಧ್ಯಮವಾಗಿದೆ. ಇ-ಆಫೀಸ್‍ನ ವೇಗ ಮತ್ತು ದಕ್ಷತೆಯು ಇಲಾಖೆಗಳಿಗೆ ತಿಳುವಳಿಕೆಯುಳ್ಳ ಮತ್ತು ಕ್ಷಿಪ್ರ ನಿರ್ಧಾರಕ್ಕೆ ಸಹಕರಿಸುವುದಲ್ಲದೆ ಬಹುಮುಖ್ಯವಾಗಿ ಅವುಗಳನ್ನು ಕಾಗದ ರಹಿತವಾಗುವಂತೆ ಮಾಡಲಿದೆ ಎಂದರು.
ಸ್ಥಳೀಯ ಸಂಸ್ಥೆಗಳು ಅರ್ಜಿ ಸ್ವೀಕರಿಸಿದ ಕ್ಷಣದಿಂದ ಸರಿಯಾದ ಕ್ರಮಗಳ ಮೂಲಕ ಅದನ್ನು ವಿಲೇವಾರಿ ಮಾಡುವವರೆಗೆ ಕ್ರಮ ವಹಿಸಲಿದೆ. ಇದು ಫೈಲ್‍ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಹಂತಗಳನ್ನು ಒಳಗೊಂಡಿರಲಿದೆ. ಸ್ಕ್ಯಾನಿಂಗ್, ಫೈಲ್ ರಚನೆ, ಟಿಪ್ಪಣಿ ರಚನೆ ಮತ್ತು ಡ್ರಾಫ್ಟ್‌ಗಳಲ್ಲಿ ಡಿಜಿಟಲ್ ಸಹಿ ಮಾಡುವುದು, ರವಾನೆ, ಫೈಲ್‍ಗಳ ವ್ಯವಸ್ಥಿತ ನಿರ್ವಹಣೆ ಇತ್ಯಾದಿ ಕೆಲಸಗಳನ್ನು ಇ-ತಂತ್ರಾಂಶದಲ್ಲಿ ನಿರ್ವಹಿಸಲು ಸಾಧ್ಯವಾಗಲಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗೃಹಲಕ್ಷಿ ಯೋಜನೆಯ ಪ್ರಗತಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಗಮನಹರಿಸಿ ಎಂದು ಸೂಚಿಸಿದರು. ಭದ್ರಾವತಿ, ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಪ್ರಗತಿ ಇನ್ನಷ್ಟು ತ್ವರಿತಗೊಳಿಸಿ. ನಿರೀಕ್ಷಿತ ಅವಧಿಯಲ್ಲಿ ಪ್ರಗತಿ ಸಾಧಿಸಿ ಎಂದು ಸೂಚಿಸಿದರು.












Click it and Unblock the Notifications