ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ; ಆಕ್ರೋಶಗೊಂಡ ಜನರಿಂದ ರಸ್ತೆ ತಡೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 13: ಗಾಂಜಾ ಅಮಲಿನಲ್ಲಿದ್ದ ಯುವಕರ ಗುಂಪೊಂದು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದಿಢೀರ್ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭದ್ರಾವತಿಯ ಹೊಸಸಿದ್ಧಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಗಾಂಜಾ ಅಮಲಿನಲ್ಲಿದ್ದ ಯುವಕರ ಗುಂಪೊಂದು ಹೊಸಸಿದ್ಧಾಪುರದಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದೆ. ಬಿಡಿಸಲು ಹೋದ ಸ್ಥಳೀಯರ ಮೇಲೂ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 ಬಿಡಿಸಲು ಹೋದವರ ಮೇಲೂ ದಾಳಿ

ಬಿಡಿಸಲು ಹೋದವರ ಮೇಲೂ ದಾಳಿ

ಭಾನುವಾರ ರಾತ್ರಿ ಹೊಸಸಿದ್ಧಾಪುರದಲ್ಲಿ ಸುಮಾರು ಎಂಟು ಯುವಕರು ದಾರಿಯಲ್ಲಿ ಸಿಕ್ಕವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ವಿನೋದ್, ರಾಜೇಶ್ ಎಂಬ ಯುವಕರ ಮುಖದ ಮೇಲೆ ಹೊಡೆದು ಕಣ್ಣಿನ ಭಾಗಕ್ಕೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಯುವಕರ ಮೇಲೆ ದಾಳಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದಿದ್ದವರ ಮೇಲೂ ಗಾಂಜಾ ಅಮಲಿನಲ್ಲಿ ಇದ್ದವರು ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದಾಳಿಕೋರರ ವಿರುದ್ಧ ತಿರುಗಿಬಿದ್ದಿದ್ದಾರೆ. ಆಗ ಅಮಲಿನಲ್ಲಿದ್ದವರು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

 ರಸ್ತೆ ತಡೆ ಮಾಡಿದ ಗ್ರಾಮಸ್ಥರು

ರಸ್ತೆ ತಡೆ ಮಾಡಿದ ಗ್ರಾಮಸ್ಥರು

ಗಾಂಜಾ ಅಮಲಿನಲ್ಲಿದ್ದ ಯುವಕರು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹೊಸ ಸಿದ್ಧಾಪುರದ ಗ್ರಾಮಸ್ಥರು ಭಾನುವಾರ ರಾತ್ರಿ ರಸ್ತೆ ತಡೆ ಮಾಡಿದರು. ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳನ್ನು ಬಂಧಿಸುವವರೆಗೂ ರಸ್ತೆಯಿಂದ ಮೇಲೇಳುವುದಿಲ್ಲ ಎಂದು ಪಟ್ಟು ಹಿಡಿದರು.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿದರು. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಮುಂದೆ ಹೀಗಾಗದಂತೆ ಕ್ರಮ ವಹಿಸುವುದಾಗಿ ತಿಳಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.

 ಒಂದು ವಾರದ ಗಡುವು

ಒಂದು ವಾರದ ಗಡುವು

ಇದೆ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್, ಭದ್ರಾವತಿಯಲ್ಲಿ ಗಾಂಜಾ ಹಾವಳಿ ಮಿತಿ ಮೀರಿದೆ. ಸುತ್ತಮುತ್ತಲ ಭಾಗದಿಂದ ಹೊಸ ಸಿದ್ಧಾಪುರದಲ್ಲಿ ಗಾಂಜಾ ಸೇವನೆಗೆ ಬರುತ್ತಿದ್ದಾರೆ. ಪೊಲೀಸರಿಗೆ ಎಷ್ಟೇ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೊಂದು ವಾರದಲ್ಲಿ ಸಿಪಿಐ ಅವರು ಕ್ರಮದ ಭರವಸೆ ಕೊಟ್ಟಿದ್ದಾರೆ. ವಾರದ ಬಳಿಕ ಗಾಂಜಾ ಹಾವಳಿ ನಿಯಂತ್ರಣಕ್ಕೆ ಬಾರದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸುತ್ತಮುತ್ತಲ ಊರುಗಳು, ಏರಿಯಾಗಳಿಂದ ಹೊಸ ಸಿದ್ಧಾಪುರಕ್ಕೆ ಬಂದು ಗಾಂಜಾ ಸೇವನೆ ಮಾಡುತ್ತಿರುವ ಆರೋಪವಿದೆ. ಇಲ್ಲಿನ ನಿರ್ಜನ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡಿ, ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು, ಆವಾಜ್ ಹಾಕುವುದು, ಹಲ್ಲೆ ನಡೆಸುವುದು ಆಗಾಗ ನಡೆಯುತ್ತಿದೆ. ಇದರಿಂದ ಹೊಸಸಿದ್ಧಾರಪುರದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹೆದರುವ ವಾತಾವರಣವಿದೆ ಎಂದು ತಿಳಿಸಿದರು.

 ಶಿವಮೊಗ್ಗ ಜಿಲ್ಲೆಯೊಳಗೆ ಗಾಂಜಾ ಪೂರೈಕೆ

ಶಿವಮೊಗ್ಗ ಜಿಲ್ಲೆಯೊಳಗೆ ಗಾಂಜಾ ಪೂರೈಕೆ

ಇತ್ತ ಪೊಲೀಸ್ ಇಲಾಖೆ ಗಾಂಜಾ ಹಾವಳಿ ತಡೆಗೆ ಕಸರತ್ತು ನಡೆಸುತ್ತಿದೆ. ಜಿಲ್ಲೆಯಾದ್ಯಂತ ಗಾಂಜಾ ಸರಬರಾಜು ಮಾಡುವವರು, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಗಾಂಜಾ ಅಮಲಿನಲ್ಲಿ ಓಡಾಡುತ್ತಿರುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಹೀಗಿದ್ದೂ, ಶಿವಮೊಗ್ಗ ಜಿಲ್ಲೆಯೊಳಗೆ ಗಾಂಜಾ ಪೂರೈಕೆಯಾಗುತ್ತಿದೆ. ಅಮಲೇರಿಸಿಕೊಳ್ಳಬೇಕು ಅಂದುಕೊಂಡವರಿಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ. ಗಾಂಜಾ ಅಮಲಿಗೆ ಸಿಲುಕಿ ಹಲವು ವಿದ್ಯಾರ್ಥಿಗಳು, ಯುವಕರು ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಟ್ಟುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

English summary
Shivamogga: Drugs Addicts Attacked On Hosa Siddapura Villagers of Bhadravati taluk, Roadblock By Outraged People on Sunday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X