ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ಯಾ?: ದಿನೇಶ್ ಗುಂಡೂರಾವ್
ಶಿವಮೊಗ್ಗ, ಆಗಸ್ಟ್ 19: "ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಯೆಡೆಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಪರಿಹಾರವೆಂದು ಕನಿಷ್ಠ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಜನಜೀವನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದರ ಬಗ್ಗೆ ಯಾವುದೇ ಪರಿಹಾರಕ್ಕೆ ಮುಂದಾಗಿಲ್ಲ. ಇದನ್ನು ನಾವು ಪ್ರಶ್ನಿಸಿದರೆ ಕಾಂಗ್ರೆಸ್ ಅನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ" ಎಂದು ಆರೋಪಿಸಿದರು.
"ಬಿಜೆಪಿ ತಮಗೆ ಬೇಕಾದ ಬಿಲ್ ಗಳನ್ನ ಪಾಸ್ ಮಾಡಲು ಉತ್ಸಾಹ ತೋರುತ್ತದೆ. ಅದೇ ಸಾರ್ವಜನಿಕರು ಮಳೆ ಹಾನಿಯಿಂದ ಬದುಕನ್ನು ಕಳೆದುಕೊಂಡಿದ್ದಾರೆ. ಅವರಿಗೆ ಧೈರ್ಯ ತುಂಬುವ ಯಾವ ಕೆಲಸವನ್ನು ಕೇಂದ್ರ ಮಾಡಿದೆ" ಎಂದು ಪ್ರಶ್ನಿಸಿದರು.

"ಮುಖ್ಯಮಂತ್ರಿಗಳು ಅತಿವೃಷ್ಟಿ ಕುರಿತು ಸರ್ವಪಕ್ಷ ಸಭೆ ಕರೆಯಬೇಕು. ಈ ಆಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಬೇಕು. ಇವ್ಯಾವೂ ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಬಿಎಸ್ ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದರು.
"ಮಳೆಯಿಂದಾಗಿ ಶಿವಮೊಗ್ಗದಲ್ಲಿ 11 ಸಾವಿರ ಎಕರೆ ಪ್ರದೇಶ ಹಾಳಾಗಿದೆ ಎಂದು ಕಾಂಗ್ರೆಸ್ ಸಮೀಕ್ಷೆ ನಡೆಸಿದೆ. ತಾತ್ಕಾಲಿಕ ಪರಿಹಾರವನ್ನಾದರೂ ಜನರಿಗೆ ಜಿಲ್ಲಾಡಳಿತ ನೀಡಬೇಕಿತ್ತು. ಆದರೆ ನೀಡಿಲ್ಲ. ತಕ್ಷಣವೇ ರಾಜ್ಯ ಸರ್ಕಾರ ಶಿವಮೊಗ್ಗದ ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಲಿ" ಎಂದು ತಿಳಿಸಿದರು.












Click it and Unblock the Notifications