Road: ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಶಿವಮೊಗ್ಗ- ಮತ್ತೂರು ಸಂಚಾರ ಸ್ಥಗಿತ!
ಶಿವಮೊಗ್ಗ ಜುಲೈ 27: ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ರಸ್ತೆಗಳ ಮೇಲೆ ಮಳೆ ನೀರು ಹರಿದು ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.
ಇದರಿಂದಾಗಿ ಶಿವಮೊಗ್ಗ- ಮತ್ತೂರು ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಎರಡ್ಮೂರು ಅಡಿ ತುಂಗಾ ನದಿ ನೀರು ನಿಂತಿದ್ದು ವಾಹನ ಸಂಚಾರ ಸಾಧ್ಯವಾಗದೆ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ತುಂಗಾ ನದಿ ನೀರಿನ ಮಟ್ಟ ಹೆಚ್ಚಳ ಹಿನ್ನಲೆ ತೋಟಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ.

ನೂರಾರು ಎಕರೆ ಕೃಷಿ ಭೂಮಿ, ತೋಟ ಜಲಾವೃತಗೊಂಡಿದೆ. ಅಪಾಯ ಮಟ್ಟದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಮಧ್ಯೆ ಹರಿಯುತ್ತಿರುವ ನೀರಿನಲ್ಲಿ ವಾಹನ ಸವಾರರ ಹುಚ್ಚಾಟದ ವಿಡಿಯೋಗಳು ವೈರಲ್ ಆಗಿವೆ.
ಉಕ್ಕಿ ಹರಿಯುತ್ತಿರುವ ತುಂಗಾ ನದಿ
ಅಧಿಕ ಮಳೆಯಿಂದಾಗಿ ಅಪಾಯ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದೆ. ಅಲ್ಲದೆ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದರಿಂದಾಗಿ ತುಂಗಾ ನದಿಯ ಹರಿವಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.
ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆ ಜನರಲ್ಲಿ ಆತಂಕ ಶುರುವಾಗಿದೆ. ಮನೆಗೆ ನೀರು ನುಗ್ಗುವ ಆತಂಕದಲ್ಲಿ ಜೀವ ಕೈಯಲ್ಲಿಟ್ಟು ಜನರು ಬದುಕು ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನದಿಯ ನೀರು ಗಂಗಾಪರಮೇಶ್ವರಿ ದೇವಾಲಯಕ್ಕೂ ನುಗ್ಗಿದೆ. 80 ಸಾವಿರ ಕ್ಯೂಸೆಕ್ ನೀರು ತುಂಗಾ ಜಲಾಶಯದಿಂದ ಬಿಡುಗಡೆಯಾಗಿದ್ದು ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ.
ಇನ್ನೂ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು ಸಕಲೇಶಪುರ ಮಾರ್ಗದಲ್ಲಿ ಸಂಚರಿಸೋ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಹೀಗಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ.
ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಇದರಿಂದಾಗಿ ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ. ಮಣ್ಣು ಕುಸಿದ ಪರಿಣಾಮ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಮಾರ್ಗ ಬದಲಿಸಲು ಸಾಧ್ಯವಿರುವ ಕಡೆ ರೈಲು ಮಾರ್ಗವನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಬದಲಾಯಿಸಿದ್ದಾರೆ.
ಇನ್ನೂ ಭಾರಿ ಮಳೆಗೆ ಚಿಕ್ಕಮಗಳೂರಿನ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ.
ಇದರಿಂದಾಗಿ ಕೊಟ್ಟಿಗೆಹಾರದಲ್ಲಿ ಕಿ.ಮೀ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿವೆ. ಕಳೆದ ಎರಡು ಗಂಟೆಗಳಿಂದ ಚಿಕ್ಕಮಗಳೂರು ದಕ್ಷಿಣ ಕನ್ನಡ ಸಂಪರ್ಕ ಬಂದ್ ಆಗಿದೆ. ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ 3-4 ಕಡೆ ಬಂಡೆ ಕಲ್ಲುಗಳು ರಸ್ತೆಗೆ ಬಿದ್ದು ಅವಾಂತರ ಸೃಷ್ಟಿಯಾಗಿದೆ.












Click it and Unblock the Notifications