ಹರ್ಷ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಗಲಭೆ; ಈಶ್ವರಪ್ಪ ವಿರುದ್ಧ ದೂರು

ಶಿವಮೊಗ್ಗ, ಮಾರ್ಚ್ 24; ಶಿವಮೊಗ್ಗ ನಗರದಲ್ಲಿ ಫೆಬ್ರವರಿ 20ರಂದು ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ನಗರದಲ್ಲಿ ಗಲಭೆ ನಡೆದಿತ್ತು. ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಳಿಕ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕರ್ಫ್ಯೂ ಜಾರಿಗೊಳಿಸಲಾಗಿತ್ತು.

ಹರ್ಷ ಹತ್ಯೆ ಪ್ರಕರಣ, ಬಳಿಕ ನಡೆದ ಗಲಭೆ ಪ್ರಕರಣದ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ, ಶಿವಮೊಗ್ಗದ ಬಿಜೆಪಿ ನಾಯಕ ಚನ್ನಬಸಪ್ಪ ವಿರುದ್ಧ ಬೆಂಗಳೂರಿನ ಅಪರ ಮುಖ್ಯ ದಂಡಾಧಿಕಾರಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲು ಮಾಡಲಾಗಿದೆ.

ಶಿವಮೊಗ್ಗ ನಗರದ ನಿವಾಸಿ, ಶಿವಮೊಗ್ಗ ಪೀಸ್ ಆರ್ಗನೈಸೇಶನ್ (ರಿ)ನ ರಿಯಾಜ್ ಅಹಮ್ಮದ್ ಈ ದೂರು ದಾಖಲು ಮಾಡಿದ್ದಾರೆ. ಹರ್ಷ ಹತ್ಯೆ ಬಳಿಕ ಪ್ರಚೋದನಾಕಾರಿ ಹೇಳಿಕೆ ನೀಡಿ ನಗರದಲ್ಲಿ ಗಲಭೆ ಉಂಟಾಗಲು ಕಾರಣವಾದ ಈಶ್ವರಪ್ಪ, ಚನ್ನಬಸಪ್ಪ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Complaint Against Eshwarappa For Provoking Statement After Harsha Murder

ದೂರಿನ ವಿವರಗಳು; 20/2/2022ರ ರಾತ್ರಿ 9 ಗಂಟೆ ಸಮಯದಲ್ಲಿ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹರ್ಷ ಎನ್ನುವ ವ್ಯಕ್ತಿಯ ಕೊಲೆಯಾಗಿರುತ್ತದೆ. ಹರ್ಷ ಎಂಬ ಯುವಕನ ಕೊಲೆ ಇಡೀ ಶಿವಮೊಗ್ಗ ನಗರದ ನಾಗರಿಕ ಸಮಾಜ ಅತ್ಯಂತ ದುಃಖ ಮತ್ತು ಅನುಕಂಪವನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ ವ್ಯಕ್ತಪಡಿಸಿ ಹರ್ಷನ ಕುಟುಂಬಕ್ಕೆ ಸಹಾನುಭೂತಿ ಮತ್ತು ಸಂತಾಪವನ್ನು ಮುಸ್ಲಿಂ ಸಮುದಾಯವು ಸೇರಿದಂತೆ ಎಲ್ಲಾ ವರ್ಗ, ಎಲ್ಲಾ ಧರ್ಮದ ಜನರು ಸೂಚಿಸಿರುತ್ತಾರೆ.

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆಯ ಠಾಣಾಧಿಕಾರಿ ತನ್ನ ಠಾಣಾ ಮೊಕದ್ದಮೆ ಸಂಖ್ಯೆ 77/2022ರಲ್ಲಿ ಭಾರತೀಯ ದಂಡ ಸಂಹಿತೆ 302 ಮತ್ತು ಇತರೆ ಕಲಂಗಳಡಿಯಲ್ಲಿ ಒಂದು ಪ್ರಕರಣವನ್ನು ಸಹ ದಾಖಲಿಸಿಕೊಂಡಿರುತ್ತಾರೆ. ಪ್ರಕರಣ ಪ್ರಾಥಮಿಕ ತನಿಖೆಯ ಹಂತದಲ್ಲಿರುವಾಗಲೇ ಪೊಲೀಸ್ ಅಧಿಕಾರಿಗಳು ಯಾವುದೇ ಆರೋಪಿಗಳನ್ನು, ಕೊಲೆಗೆ ನಿಜವಾದ ಕಾರಣಕರ್ತರನ್ನು ಕೊಲೆಯ ಹಿಂದಿರುವ ಉದ್ದೇಶವನ್ನು ತನಿಖೆ ಮಾಡುವ ಮೊದಲೇ ಈಶ್ವರಪ್ಪ ಮತ್ತು ಚನ್ನಬಸಪ್ಪ ಏಕಪಕ್ಷೀಯವಾಗಿ ರಾಜಕೀಯ ಮತ್ತು ಧಾರ್ಮಿ ಕಾರಣಗಳಿಂದ ಸದರಿ ಹರ್ಷ ಎಂಬ ಯುವಕನ ಕೊಲೆಗೆ ಮುಸ್ಲಿಂ ಜನಾಂಗವೇ ಕಾರಣ ಎಂದು ದುರುದ್ದೇಶದಿಂದ ಹಾಗೂ ಮುಸ್ಲಿಂ ಜನಾಂಗವನ್ನು ಗುರುತರವಾದ ಸಮುದಾಯಿಕ ಆರೋಪಕ್ಕೆ ಒಳಪಡಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಹೇಳಿಕೆ ನೀಡಿರುತ್ತಾರೆ.

ಈ ಮೂಲಕ ಶಿವಮೊಗ್ಗದ ಒಂದು ಕೋವಿನ ಜನರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ದೊಂಬಿ, ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುವ ರೀತಿಯಲ್ಲಿ ಗಲಭೆಯನ್ನು ಪ್ರಚೋದಿಸಿದ್ದು, ಸದರಿ ಪ್ರಚೋದನೆ ಪರಿಣಾಮವಾಗಿ ಶಿವಮೊಗ್ಗ ನಗರವು ಒಂದು ಕೋಮಿನ ವಿರುದ್ಧವಾಗಿ ಮೆರವಣಿಗೆ ನೆಪದಲ್ಲಿ 21/2/2022ರಂದು ದೊಂಬಿಯನ್ನು ನಡೆಸಿ ಹಲವಾರು ಅಮಾಯಕರ ಮೇಲೆ ಕಲ್ಲು ತೂರಾಟ ಮಾಡಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಅಂಗಡಿ ಮತ್ತು ವಾಹನಗಳಿಗೆ ಹಾನಿ ಮಾಡುವ ಮೂಲಕ ಗಲಭೆ ನಡೆಸಲಾಗಿರುತ್ತದೆ.

ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ನಗರದ ಶಾಸಕರಾಗಿದ್ದು ವಿಧಾನಸಭೆಯಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಎಲ್ಲಾ ಜಾತಿ, ಧರ್ಮ ಮತ್ತು ವರ್ಗದ ಜನರನ್ನು ಯಾವುದೇ ಬೇದ-ಭಾವವಿಲ್ಲದೇ ಸಮಾನವಾಗಿ ನೋಡುವ ಎಲ್ಲಾ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಚನ್ನಬಸಪ್ಪ ಸಹ ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಯಾಗಿದ್ದು, ಇವರು ಸಹ ಎಲ್ಲಾ ಜಾತಿ, ಧರ್ಮ ಮತ್ತು ವರ್ಗಗಳ ಜನರನ್ನು ಸಮಾನವಾಗಿ ನೋಡುವ ಜವಾಬ್ದಾರಿಯುತ ವ್ಯಕ್ತಿಯಾಗಿರುತ್ತಾರೆ.

ಹರ್ಷ ಹತ್ಯೆ ನಡೆದಾಗ ಈಶ್ವರಪ್ಪ ಅವರು, "ಮುಸಲ್ಮಾನ ಗೂಂಡಾಗಳು ಹರ್ಷ ಎನ್ನುವ ಯುವಕನ ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಕೂಡ ಈ ರೀತಿ ಬಾಲ ಬಿಚ್ಚಿರಲಿಲ್ಲ. ಇವರ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಮುಸಲ್ಮಾನ್ ಗೂಂಡಾಗಳಿಗೆ ಕಾಂಗ್ರೆಸ್ ಪಕ್ಷದ ನಾಯಕ ಡಿ. ಕೆ. ಶಿವಕುಮಾರ್ ಕುಮ್ಮಕ್ಕು ಸಿಗುತ್ತಿದೆ. ಈ ಮುಸಲ್ಮಾನ್ ಗೂಂಡಾಗಿರಿಯನ್ನು ನಮ್ಮ ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ ಅದನ್ನು ಧಮನ ಮಾಡುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.

ಚನ್ನಬಸಪ್ಪ ಅವರು ಮಾಧ್ಯಮಗಳ ಮುಂದೆ "ಪೊಲೀಸರಿಗೆ ಈ ಜನ್ಮದಲ್ಲಿ ಬುದ್ಧಿ ಬರುವುದಿಲ್ಲ. ಪೊಲೀಸ್ ಹೆಣ ಬೀಳುತ್ತೆ ಅಲ್ಲ ಆವಾಗ ನೆಟ್ಟ ಆಗುತ್ತಾರೆ. ಪೊಲೀಸರಿಗೆ ಹೆಣ ಬೀಳಬೇಕು. ಪ್ರತಿ ಸಲವೂ ನಾವು ಅವರನ್ನು ಕಳಕೊ, ಇವರನ್ನು ಕಳಕೊ. ನಾವು ಯಾವತ್ತೂ ಕೂಡಾ ಹಿಂದೂಗಳನ್ನೇ ಕಳೆದುಕೊಂಡಿರುವುದು. ಪೊಲೀಸ್ ನಾಮರ್ದ ಇಲಾಖೆ. ಅದು ರಕ್ಷಣಾ ಇಲಾಖೆ ವೈಫಲ್ಯತೆ, ದೌರ್ಬಲ್ಯತೆ ಇದೆ. ಮುಸಲ್ಮಾನ್ ಗೂಂಡಾಗಳು ಇತರ ಪ್ರಕ್ರಿಯೆಯಲ್ಲಿ ಬಹಳಷ್ಟು ತೊಡಗಿಕೊಂಡಿದ್ದಾರೆ. ನಾಮರ್ದ ಪೊಲೀಸ್ ಇಲಾಖೆಗೆ ಏನು ಮಾಡಬೇಕು ಗೊತ್ತಿದೆ" ಎಂದು ಹೇಳಿಕೆ ಕೊಟ್ಟಿದ್ದಾರೆ.

ಇಬ್ಬರು ನಾಯಕರು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡದೇ ಗಲಭೆ ಉಂಟಾಗುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿದ ಕಾರಣ ಶಿವಮೊಗ್ಗ ನಗರದ ಸೀಗೆಹಟ್ಟಿ ಬಡಾವಣೆ, ರವಿವರ್ಮ ಬೀದಿ ಮುಂತಾದ ಕಡೆ ಗಲಭೆ ಆಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈಶ್ವರಪ್ಪ ಮತ್ತು ಚನ್ನಬಸಪ್ಪ ಜನಪ್ರತಿನಿಧಿಗಳಾಗಿರುವುದರಿಂದ ಘನ ನ್ಯಾಯಾಲಯ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ನ್ಯಾಯಾಧೀಕರಣದ ವ್ಯಾಪ್ತಿ ಇರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಗೆ ಇಬ್ಬರು ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Recommended Video

      Siddaramaiah ನವರು ಸಿದ್ದರಾಮೇಶ್ವರ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+