Breaking:ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸಿದ ಬಿಎಸ್‌ವೈ
ಶಿವಮೊಗ್ಗ, ಜುಲೈ 22: "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ. ತಮ್ಮ ಬದಲು ಕಿರಿಯ ಪುತ್ರ ಬಿ. ವೈ. ವಿಜಯೇಂದ್ರ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ, ಶಿಕಾರಿಪುರದ ಶಾಸಕ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ಘೋಷಿಸಿದ್ದಾರೆ.
ಶುಕ್ರವಾರ ಅಂಜನಾಪುರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, "ತಮ್ಮ ಬದಲು ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ. ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕೆಂದು ಮತದಾರರಲ್ಲಿ ಪ್ರಾರ್ಥನೆ ಮಾಡುತ್ತೇನೆ" ಎಂದು ತಿಳಿಸಿದರು.
ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸಿದ ಬಿಎಸ್‌ವೈhttps://t.co/FigvbQiA4U #Shivamogga #BSyediyurappa #Shikaripura #BYvijayendra #ಒನ್ಇಂಡಿಯಾಕನ್ನಡಸುದ್ದಿ pic.twitter.com/R9aBYHLlKf
— oneindiakannada (@OneindiaKannada) July 22, 2022
ಹಳೇ ಮೈಸೂರು ಭಾಗದಲ್ಲಿಯೂ ವಿಜಯೇಂದ್ರನ ಸ್ಪರ್ಧೆ ಬಗ್ಗೆ ಒತ್ತಡವಿದೆ ಎಂಬ ಪ್ರಶ್ನೆಗೆ ಉತ್ತರಿಸಿ, "ಅಲ್ಲಿಯೂ ಬಹಳ ಒತ್ತಡವಿದೆ. ಆದರೆ ತಾವು ಕ್ಷೇತ್ರ ಖಾಲಿ ಮಾಡುತ್ತಿರುವುದರಿಂದ ವಿಜಯೇಂದ್ರನೇ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ" ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ. ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿರುವುದರ ಬಗ್ಗೆ ಪ್ರತಿಕ್ರಿಯಿಸಿ, "ಈಶ್ವರಪ್ಪಗೆ ನಿನ್ನೆಯೇ ಕರೆ ಮಾಡಿ ಅಭಿನಂದನೆ ತಿಳಿಸಿದ್ದೇನೆ. ಇನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಇದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ" ಎಂದು ತಿಳಿಸಿದರು.
ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿ, "ತಂದೆ ಬಿ. ಎಸ್. ಯಡಿಯೂರಪ್ಪನವರು ಯಾವ ರೀತಿ ಮಾರ್ಗದರ್ಶನ ಕೊಡುತ್ತಾರೋ ಮತ್ತು ಪಕ್ಷ ಏನೂ ನಿರ್ಧಾರ ತೆಗೆದುಕೊಳ್ಳುತ್ತದೋ ಅದನ್ನು ಆಧರಿಸಿ ನಾನು ತೀರ್ಮಾನ ತೆಗೆದುಕೊಳ್ಳುತ್ತೇನೆ. ಬಿಜೆಪಿ ಪಕ್ಷದ ರಾಜ್ಯದ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದು ನನ್ನ ಕರ್ತವ್ಯವಾಗಿದೆ. ಇದನ್ನು ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಮಾಡಿಕೊಂಡು ಹೋಗುತ್ತೇನೆ" ಎಂದರು.
ಶಿಕಾರಿಪುರವೇ ಬೇಕೆಂದು ಬಯಸಿದ್ದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ತಂದೆಯ ಮಾರ್ಗದರ್ಶನ, ಪಕ್ಷದ ತೀರ್ಮಾನದ ಪ್ರಕಾರ ನಾನು ನಡೆದುಕೊಳ್ಳುತ್ತೇನೆ. ಇದನ್ನು ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ಅದರಂತೆ ನಡೆದುಕೊಳ್ಳುತ್ತೇನೆ" ಎಂದು ಹೇಳಿದರು.
"ಒಂದು ತಿಂಗಳ ಹಿಂದೆ ಶಿಕಾರಿಪುರ ತಾಲೂಕಿನ ಮುಖಂಡರು ಬೆಂಗಳೂರಿಗೆ ಬಂದು ತಂದೆಯ ಮೇಲೆ ಶಿಕಾರಿಪುರದಲ್ಲಿ ನನ್ನನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಒತ್ತಡ ಹಾಕಿದ್ದರು. ಇದೀಗ ತಂದೆಯವರು ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಬಿ. ವೈ. ವಿಜಯೇಂದ್ರ ತಿಳಿಸಿದರು.












Click it and Unblock the Notifications