ಸಾರಿಗೆ ಮುಷ್ಕರ: ಬೆಂಬಲ ಹಿಂಪಡೆದ KSRTC ನೌಕರರ ಸಂಘ: ಮೇ 25ಕ್ಕೆ ಮಹತ್ವದ ಸಭೆ
ಬೆಂಗಳೂರು: ಸಾರಿಗೆ ನೌಕರರು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಹೈಕೋರ್ಟ್ ತಡೆ ನೀಡಿದೆ. ಇದಕ್ಕೂ ಮೊದಲೇ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ' ಮುಷ್ಕರ ಸಂಬಂಧ ನೀಡಿದ್ದ ಬೆಂಬಲವನ್ನು ಎರಡು ಸಂಘಗಳು ಹಿಂಪಡೆದಿವೆ. ಇದರಿಂದ ಸಮಿತಿಗೆ ಹಿನ್ನಡೆ ಆಗಿದೆ. ಅದರೆ ನಾಳೆ ಮುಷ್ಕರ ನಡೆಯುತ್ತಾ? ಬಸ್ ಸಂಚಾರ ಇರುತ್ತಾ ಇಲ್ಲವೇ ಎಂಬ ಗೊಂದಲ ಸೃಷ್ಟಿಯಾಗಿದೆ.
ಕರ್ನಾಕಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಎಸ್‌ಸಿ, ಎಸ್‌ಟಿ ನೌಕರರ ಸಂಘ ಸೋಮವಾರ ಸಮಿತಿಗೆ ನೀಡಿದ್ದ ಬೆಂಬಲ ಹಿಂಪಡೆದಿತ್ತು. ಇಂದು ಮಂಗಳವಾರ KSRTC ನೌಕರರ ಸಂಘವು ಸಹ ಸಮಿತಿಯಿಂದ ಹೊರ ಬಂದು ಮುಷ್ಕರ ನಡೆಸಲು ನೀಡಿದ್ದ ಬೆಂಬಲ ಹಿಂಪಡೆದಿದ್ದಾಗಿ ಸಂಘದ ಅಧ್ಯಕ್ಷ ಜಗದೀಶ್ ಹೆಚ್.ಆರ್. ತಿಳಿಸಿದ್ದಾರೆ.

ಸಮಿತಿಯಲ್ಲಿಲ್ಲ ಒಮ್ಮತ, ಭಿನ್ನಾಭಿಪ್ರಾಯ ಸ್ಪೋಟ
ನಮ್ಮ ಸಂಘವು ಸುಮಾರು ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ಹಿತಾಸಕ್ತಿಗಾಗಿ ಹಲವು ಹೋರಾಟ ಮಾಡುತ್ತಾ ಬಂದಿದೆ. 2020-24 ವೇತನ ಒಪ್ಪಂದದ ಸಂಬಂಧ ಸದರಿ ಜಂಟಿ ಕ್ರಿಯಾ ಸಮಿತಿಗೆ ಸಂಪೂರ್ಣ ಬೆಂಬಲವನ್ನು ನೀಡಿ, ಜಂಟಿ ಸಮಿತಿಯ ಒಂದು ಕ್ರಿಯಾಶೀಲ ಭಾಗವಾಗಿ ಕಾರ್ಮಿಕರ ಹಿತಕ್ಕಾಗಿ ಕೆಲಸ ಮಾಡಿರುವುದು ಸರಿಯಷ್ಟೇ. ಮೇ 20ಕ್ಕೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ನಂತರ ಜಂಟಿ ಕ್ರಿಯಾ ಸಮಿತಿಯ ಒಳಗೆ ಭಿನ್ನಾಭಿಪ್ರಾಯಗಳ ಭುಗಿಲೆದ್ದವು.
ಅದರಿಂದ ಯಾವ ಉದ್ದೇಶಕ್ಕಾಗಿ ಜಂಟಿ ಕ್ರಿಯಾ ಸಮಿತಿಗೆ ನಾವು ಬೆಂಬಲ ನೀಡಿದ್ದೇವೋ ಅದೇ ಉದ್ದೇಶಗಳು ಈಡೇರುತ್ತಿಲ್ಲ. ನೌಕರರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲವೆನ್ನುವುದು ನಮಗೆ ತಿಳಿದಿದೆ ಎಂದು ಅವರು ಹೇಳಿದರು.
ಮೇ 25ಕ್ಕೆ ನೌಕರರೊಂದಿಗೆ ಮಹತ್ವದ ಸಭೆ
ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿರುವ ಮುಷ್ಕರದ ಸಂಭಂದ ದಿನಾಂಕ ಮೇ 18 ಕಾರ್ಮಿಕ ಆಯುಕ್ತರು ಸಂಧಾನ ಸಭೆ ನಡೆಸಿದ್ದರು. ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಆದಷ್ಟು ಬೇಗ ಬಗೆಹರಿಸುವುದಾಗಿ ತಿಳಿಸಿ ಕಾಲಾವಕಾಶ ಕೋರಿದ್ದಾರೆ. ಅಲ್ಲದೇ ಮೇ 25 ರಂದು ಸಭೆ ನಿಗದಿಪಡಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರು ಮೇ 18 ರಂದು ನಮ್ಮೊಂದಿಗೆ ಸಭೆ ನಡೆಸಿದ್ದರು. ಸರ್ಕಾರದ ಮನವೊಲಿಸಿ ಶೀಘ್ರವೇ ತಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸುವುದಾಗಿ ಗಟ್ಟಿ ಭರವಸೆ ನಿಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ನಮ್ಮ ಸಂಘದ ಸದಸ್ಯರು ಒಕ್ಕೋರಲಿನಿಂದ ನಿರ್ಧರಿಸಿ ಜಂಟಿ ಕ್ರಿಯಾ ಸಮಿತಿಗೆ ನೀಡಿದ ಮುಷ್ಕರದ ಬೆಂಬಲ ಹಿಂಪಡೆದಿದ್ದೇವೆ ಎಂದು ತಿಳಿಸಿದ್ದಾರೆ.













Click it and Unblock the Notifications