ಆಪ್ತಮಿತ್ರನ ಆಗಮನದ ಕುರಿತು ಈಶ್ವರಪ್ಪ ಹೇಳಿದ್ದೇನು?
ಶಿವಮೊಗ್ಗ, ನ.7 : "ಕೆಜೆಪಿ ಜೊತೆ ಯಾವುದೇ ಹೊಂದಾಣಿಕೆ ಇಲ್ಲ, ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರಳುತ್ತಾರೆ. ಆದ್ದರಿಂದ ಮೈತ್ರಿ ಪ್ರಶ್ನೆ ಎಲ್ಲಿಂದ ಬಂತು" ಹೀಗೆ ತಮ್ಮ ಆಪ್ತ ಗೆಳೆಯನ ಬಗ್ಗೆ ಮಾತನಾಡಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ.
ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮರಳುವುದರಿಂದ ಕೆಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಯಡಿಯೂರಪ್ಪ ಬಿಜೆಪಿಗೆ ಮರಳಿ ಬಂದೇ ಬರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತು ರಾಜ್ಯ ನಾಯಕರು ಮತ್ತು ಕಾರ್ಯಕರ್ತರು ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಅದನ್ನು ವರಿಷ್ಠರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರಿಗೆ ಪಕ್ಷಕ್ಕೆ ಸ್ವಾಗತವಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವುದರಿಂದ ಕೆಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ನಾವು ಸ್ಪರ್ಧೆ ಮಾಡುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರು ಈಗಾಗಲೇ ಯಡಿಯೂರಪ್ಪ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಮುಂಬೈನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರಿಗೆ ರಾಜ್ಯ ಬಿಜೆಪಿ ಕಾರ್ಯಕರ್ತರ ತೀರ್ಮಾನವನ್ನು ತಿಳಿಸಿ, ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸಹ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.
ರಾಜ್ಯ ನಾಯಕರು, ಹೈ ಕಮಾಂಡ್ ನಾಯಕರು ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಒಪ್ಪಿಗೆ ನೀಡಿದ್ದಾರೆ. ಆದರೆ, ಯಡಿಯೂರಪ್ಪ ಪಕ್ಷಕ್ಕೆ ಮರಳುವುದು ಯಾವಾಗ ? ಎಂಬುದು ಅಂತಿಮವಾಗಿಲ್ಲ ಎಂದರು. (ಯಡಿಯೂರಪ್ಪ ವಿಷಯ ನಮಗೆ ಬಿಡಿ : ರಾಜನಾಥ್ ಸಿಂಗ್)
ಬುಧವಾರ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸಹ ಕೆಜೆಪಿಯೊಂದಿಗೆ ಹೊಂದಾಣಿಕೆ ಇಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆಗೆ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಆ ಮೂಲಕ ಯಡಿಯೂರಪ್ಪ ಪಕ್ಷಕ್ಕೆ ಮರಳುತ್ತಾರೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದರು. ಆದರೆ, ತಮ್ಮ ಆಪ್ತ ಮಿತ್ರನ ಆಗಮನದ ಬಗ್ಗೆ ಈಶ್ವರಪ್ಪ ಮನಬಿಚ್ಚಿ ಮಾತನಾಡಿದ್ದಾರೆ. (ಕೆಜೆಪಿ ಬಗ್ಗೆ ಆಯನೂರು ಮಂಜುನಾಥ್ ಹೇಳಿದ್ದೇನು?)












Click it and Unblock the Notifications