Bhadra Dam: ಮುಂಗಾರು ಆರ್ಭಟದಿಂದ ಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ.!-ಅಂಕಿಅಂಶಗಳ ವಿವರ ಇಲ್ಲಿದೆ
Bhadra Dam: ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಈ ಭಾಗದಲ್ಲಿ ಸಣ್ಣ ಪುಟ್ಟ ಜಲಮೂಲಗಳು ಉಕ್ಕಿಹರಿಯುತ್ತಿವೆ. ಹಾಗೆಯೇ ಮತ್ತೊಂದೆಡೆ ಭದ್ರಾ ಜಲಾಶಯದ ಒಳಹರಿವು ಕೂಡ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಪ್ರಸ್ತುತ ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಹಾಗೂ ಯಾವೆಲ್ಲ ಭಾಗಗಳಿಗೆ ಇದರಿಂದ ಸಹಾಯಕವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಕಳೆದ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ಬರದ ವಾತಾವರಣ ನಿರ್ಮಾಣವಾಗಿದ್ದು, ಪರಿಣಾಮ ಭದ್ರಾ ಜಲಾಶಯದಲ್ಲಿ 68 ವರ್ಷದಲ್ಲಿಯೇ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಇನ್ನು ಇದೀಗ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿಕೊಂಡಿದೆ.
ಆದರೆ, ಒಂದು ವಾರದಿಂದ ಮಳೆಯ ಪ್ರಮಾಣ ತುಸು ತಗ್ಗಿದ್ದು, ಇದೀಗ ಮತ್ತೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದಾನೆ. ಹೀಗೆ ಮಳೆ ಮುಂದುವರೆದರೆ, ಜಲಾಶಯದ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿ, ಇದರಿಂದ ರೈತರ ಮುಖದಲ್ಲೂ ಮಂದಹಾಸ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಜೂನ್ 26ರಂದು ನೀರಿನ ಮಟ್ಟ 120 ಅಡಿಯಷ್ಟಿದೆ. ಒಳ ಹರಿವು 2,276 ಕ್ಯೂಸೆಕ್‌ನಷ್ಟಿದೆ. ಈ ಭದ್ರಾ ಜಲಾಶಯ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಜೀವನಾಡಿಯಾಗಿದೆ ಎಂದರೆ ತಪ್ಪಾಗಲಾರದು.
ಭದ್ರಾ ಜಲಾಶಯ ನೀರಿನ ಮಟ್ಟ
* ಒಟ್ಟು ನೀರಿನ ಸಾಮರ್ಥ್ಯ -71.54 ಟಿಎಂಸಿ
* ಗರಿಷ್ಠ ನೀರಿನ ಮಟ್ಟ- 186 ಅಡಿ
* ಇಂದಿನ ಮಟ್ಟ - 120 ಅಡಿ
* ಪ್ರಸ್ತುತ ಒಳ ಹರಿವು - 2276 ಕ್ಯೂಸೆಕ್
* ಹೊರ ಹರಿವು - 343 ಕ್ಯೂಸೆಕ್
ಈ ಭಾಗದಲ್ಲಿ ಸತತವಾಗಿ ಮಳೆರಾಯ ಅಬ್ಬರಿಸುತ್ತಲೇ ಇದ್ದಾರೆ. ಈ ಹಿನ್ನೆಲೆ ಜಲಾಶಯದ ಒಳ ಹರಿವಿನ ಪ್ರಮಾಣ ನಿದಾನಗತಿಯಲ್ಲಿ ಏರುತ್ತಲೇ ಇದೆ. ಜೂನ್ 24ರಂದು ಒಳಹರಿವು 771 ಕ್ಯೂಸೆಕ್, ಜೂನ್ 25ರಂದು 1,419 ಕ್ಯೂಸೆಕ್ ಇದ್ದರೆ, ಇಂದು (ಜೂ.26) 2,276 ಕ್ಯೂಸೆಕ್ ಒಳಹರಿವು ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಗಿತ್ತಾಗುತ್ತದೆ, ಜಲಾಶಯದ ಒಳಹರಿವಿನಲ್ಲಿ ಹೆಚ್ಚಾಗುತ್ತಲೇ ಇದೆ ಎಂದು.
ಒಟ್ಟಿನಲ್ಲಿ ಭಾರೀ ಮಳೆಯಿಂದ ಜಲಾಶಯದ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಭಾಗದಲ್ಲಿ ಸೊರಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.












Click it and Unblock the Notifications