Explained: ಶಿವಮೊಗ್ಗದ ಹರ್ಷ ಹತ್ಯೆ ಸುತ್ತಲಿನ ಬೆಳವಣಿಗೆಗಳು
ಶಿವಮೊಗ್ಗ, ಫೆಬ್ರವರಿ 22: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಬೆನ್ನಲ್ಲೇ ಶಿವಮೊಗ್ಗ ನಗರ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸೋಮವಾರ ಮೃತ ಹರ್ಷನ ಅಂತ್ಯಕ್ರಿಯೆ ನಂತರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಶಿವಮೊಗ್ಗದಲ್ಲಿ ಎರಡು ದಿನ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಗರದಾದ್ಯಂತ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಕಾವಲು ಹೆಚ್ಚಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ಮಂಗಳವಾರವೂ ಸಹ (ಫೆ.22) ರಜೆ ಘೋಷಿಸಲಾಗಿದೆ. ಭಾನುವಾರ ನಡೆದ ಒಂದು ಘಟನೆ ಇಡೀ ನಗರದ ಚಿತ್ರಣವನ್ನೇ ಬದಲಾಯಿಸಿದೆ.
ಭಾನುವಾರ ಸಂಜೆವರೆಗೂ ಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮತ್ತು ತದನಂತರದ ಪ್ರಮುಖ ಬೆಳವಣಿಗೆಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಹರ್ಷ ಹತ್ಯೆ ಸುತ್ತಲಿನ ಪ್ರಮುಖ ಬೆಳವಣಿಗೆಗಳು:
- ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತೀ ಕಾಲೋನಿಯಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಯುವಕರ ಗುಂಪೊಂದು ಭಜರಂಗ ದಳ ಕಾರ್ಯಕರ್ತ ಹರ್ಷನ ಮೇಲೆ ಏಕಾಏಕಿ ದಾಳಿ ನಡೆಸಿತು. ಮಾರಕಾಸ್ತ್ರಗಳಿಂದ ನಡೆಸಿದ ಹಲ್ಲೆಯಿಂದಾಗಿ ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ 26 ವರ್ಷದ ಹರ್ಷ ಮೃತಪಟ್ಟರು.
- ಹರ್ಷ ಹತ್ಯೆ ನಂತರ ನಗರದ ಹಲವು ಪ್ರದೇಶದಲ್ಲಿ ಉದ್ರಿಕ್ತರ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿತು. ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಯಿತು. ಮೆಗ್ಗಾನ್ ಆಸ್ಪತ್ರೆಯಿಂದ ಮನೆಗೆ ಪಾರ್ಥೀವ ಶರೀರ ತಲುಪುವ ವೇಳೆಗೆ ಭಜರಂಗದಳದ ಬೆಂಬಲಿಗರ ದೊಡ್ಡ ದಂಡು ಅಂತಿಮ ದರ್ಶನಕ್ಕೆ ಸೇರಿತ್ತು.
- ಶಾಲಾ-ಕಾಲೇಜು, ಸಾರ್ವಜನಿಕ ಸಭೆಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಫೆಬ್ರವರಿ 23 ರಾತ್ರಿ 9 ಗಂಟೆವರೆಗೂ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದರು.
- ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಬುದ್ಧನಗರ ನಿವಾಸಿ ಖಾಸಿಮ್ ಹಾಗೂ ಜೆಪಿ ನಗರದ ನಿವಾಸಿ ಸೈಯ್ಯದ್ ನದೀಂ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಶಿವಮೊಗ್ಗ ನಗರದ ಸೀಗೆಹಳ್ಳಿ ಪ್ರದೇಶದಲ್ಲಿರುವ ಹರ್ಷ ನಿವಾಸದ ಸುತ್ತ ಭದ್ರತೆಗಾಗಿ ಆರ್ಎಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
- ಹರ್ಷನ ಹತ್ಯೆಗೂ ಹಿಜಾಬ್ ವಿವಾದಕ್ಕೂ ಈವರೆಗಿನ ತನಿಖೆಯಿಂದ ಯಾವುದೇ ಸಂಬಂಧ ಬಹಿರಂಗವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು. ಈ ಘಟನೆಗೂ ಹಿಜಾಬ್ ವಿಚಾರಕ್ಕೂ ಯಾವುದೇ ನಂಟು ಇಲ್ಲ, ಇದು ಬೇರೆ ಬೇರೆ ಕಾರಣಗಳಿಂದ ನಡೆದಿದೆ. ಶಿವಮೊಗ್ಗ ಸೂಕ್ಷ್ಮ ನಗರವಾಗಿದೆ ಎಂದು ಸಚಿವರು ತಿಳಿಸಿದರು.
- ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದ ಸುಳಿವುಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
- ಹಿಜಾಬ್ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗಳೇ ಹತ್ಯೆಗೆ ಪ್ರಚೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
- ಹರ್ಷ ಪ್ರಾಮಾಣಿಕ ವ್ಯಕ್ತಿ ಎಂದು ಸಚಿವ ಕೆಎಸ್ ಈಶ್ವರಪ್ಪ ಬಣ್ಣಿಸಿದರು. "ಮುಸ್ಲಿಂ ಗೂಂಡಾಗಳು ಅವರನ್ನು ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ, ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ದೂಷಿಸಿದ್ದರು. ಹಿಜಾಬ್ ವಿರೋಧಿ ಪ್ರತಿಭಟನೆಗಾಗಿ ಸೂರತ್‌ನ ಕಾರ್ಖಾನೆಯಿಂದ ಸುಮಾರು 50 ಲಕ್ಷ ಕೇಸರಿ ಶಾಲುಗಳನ್ನು ಆರ್ಡರ್ ಮಾಡಲಾಗಿದೆ ಎಂಬುದಾಗಿ ನೀಡಿದ ಹೇಳಿಕೆ ನಂತರ ಗೂಂಡಾಗಿರಿ ಹೆಚ್ಚಾಗಿದೆ," ಎಂದು ಈಶ್ವರಪ್ಪ ಆರೋಪಿಸಿದರು.
- ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರೊಬ್ಬ ಹುಚ್ಚು ವ್ಯಕ್ತಿ ಎಂದರು. ಅವರ ನಾಲಿಗೆಗೂ ಮೆದುಳಿಗೂ ಸಂಬಂಧವಿಲ್ಲ ಎಂದು ಲೇವಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
- ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ವಿಫಲರಾದ ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.











Click it and Unblock the Notifications