ಶಿವಮೊಗ್ಗದ ಹರ್ಷ ಕೊಲೆ ಕೇಸ್; ಆರೋಪಿ ಫರಜ್ ಪಾಷಾಗಿಲ್ಲ ಜಾಮೀನು
ಬೆಂಗಳೂರು, ಜುಲೈ 04; ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಆರೋಪಿ ಫರಜ್ ಪಾಷಾಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಪ್ರಕರಣದಲ್ಲಿ ಮೇಲ್ಮನವಿದಾರ ಪಾಷಾ 8ನೇ ಆರೋಪಿಯಾಗಿದ್ದಾನೆ. ಇದರಿಂದಾಗಿ ಫರಜ್ ಪಾಷಾ ಇನ್ನೂ ಸದ್ಯ ಜೈಲಿನಿಂದ ಹೊರಬರುವಂತಿಲ್ಲ.
ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಶಿವಮೊಗ್ಗದ ಹೊಸಬೀದಿ ನಿವಾಸಿ ಫರಜ್ ಪಾಷಾ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ. ಬಸವರಾಜು ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು?; ಶಿವಮೊಗ್ಗದ ನಗರದ ಭಾರತಿ ನಗರದ ಅಡ್ಡರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಎದುರು 2022ರ ಫೆ.20ರಂದು ಹರ್ಷ ಅಲಿಯಾಸ್ ಹಿಂದು ಹರ್ಷನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಪೇಟೆ ಠಾಣಾ ಪೊಲೀಸರು, ತನಿಖೆ ನಡೆಸಿ ಮೇಲ್ಮನವಿದಾರನ್ನು ಬಂಧಿಸಿದ್ದರು. ನಂತರ ತನಿಖೆಯು ಎನ್‌ಐಎ ಪೊಲೀಸರಿಗೆ ವರ್ಗಾವಣೆಯಾಗಿತ್ತು.
ಎನ್‌ಐಎ ಪೊಲೀಸರು ತನಿಖೆ ಪೂರ್ಣಗೊಳಿಸಿ, ಪಾಷಾ ವಿರುದ್ಧ ಕೊಲೆ ಹಾಗೂ ಅಕ್ರಮ ಕೂಟ, ಭಯೋತ್ಪದಾನೆ ಕೃತ್ಯ ಎಸಗಿದ ಆರೋಪದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಜಾಮೀನು ಕೋರಿ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಎನ್‌ಐಎ ವಿಶೇಷ ನ್ಯಾಯಾಲಯವು 2022ರ ಡಿ.17ರಂದು ಆದೇಶಿಸಿತ್ತು. ಇದರಿಂದ ಮೇಲ್ಮನವಿದಾರ ಹೈಕೋರ್ಟ್ ಮೊರೆ ಹೋಗಿದ್ದ.
ಕೋರ್ಟ್ ಏನು ಹೇಳಿದೆ?; ಕಾನೂನು ಬಾಹಿರ ಚುಟುವಟಿಕೆಗಳ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಅರ್ಜಿದಾರ ಆರೋಪಿ ವಿರುದ್ಧ ಹೊರಿಸಲಾಗಿರುವ ಅಪರಾಧಗಳು ನಿಸ್ಸಂದೇಹವಾಗಿ ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವಂತಿವೆ. ಜತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು.
ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಅರ್ಜಿದಾರ ಕೋಮುವಾದಿಗಳಂತೆ ಕಂಡುಬರುತ್ತಾನೆ. ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹರ್ಷನನ್ನು ಹತ್ಯೆಗೆ ಆಯ್ದುಕೊಳ್ಳಲಾಗಿದೆ. ಹೀಗಾಗಿ, ಮೇಲ್ಮನವಿದಾರನ ವಯಸ್ಸು ಚಿಕ್ಕದು ಮತ್ತು ಆತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಜಾಮೀನು ನೀಡಲು ಪರಿಗಣಿಸಬೇಕಾದ ಅಂಶವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತನಿಖೆಯ ಪ್ರಕಾರ 1 ರಿಂದ 6ನೇ ಆರೋಪಿಗಳು ಅಕ್ರಮವಾಗಿ ಸಂಘಟಿತರಾಗಿ ಹಿಂದೂಗಳಲ್ಲಿ ಭಯ ಬಿತ್ತಲು ಹರ್ಷನನ್ನು ಕೊಲ್ಲಲು ನಿರ್ಧರಿಸಿದ್ದರು. ಪ್ರಕರಣದಲ್ಲಿ ಮೇಲ್ಮನವಿದಾರರನ್ನು ನಂತರ ಹೆಸರಿಸಿರುವುದು ನಿಜ. ಆದರೆ, ಮೊದಲ 7 ಆರೋಪಿಗಳ ಸಂಚನ್ನು ತಿಳಿದ ಮೇಲ್ಮನವಿದಾರ, ಹರ್ಷನನ್ನು ಹಿಂಬಾಲಿಸಿ ಮಾಹಿತಿ ನೀಡಿದ್ದರಿಂದಲೇ ಅವರು ತಮ್ಮ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗಿದೆ.
ಹೀಗಾಗಿ, ಮಾಹಿತಿ ನೀಡುವ ಮೂಲಕ ಮೇಲ್ಮನವಿದಾರ ಕೂಡ ಕೊಲೆ ಪ್ರಕರಣದ ಪಿತೂರಿಯ ಭಾಗವಾಗಿದ್ದಾನೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪಾಷಾ ಜಾಮೀನು ಅರ್ಜಿ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪರ ವಕೀಲ ಪಿ. ಪಸನ್ನ ಕುಮಾರ್ ವಾದ ಮಂಡಿಸಿದ್ದರು.












Click it and Unblock the Notifications