ಜಾರ್ಖಂಡ್: ಬುಡಕಟ್ಟು ಮಹಿಳೆಗೆ ಟಾಯ್ಲೆಟ್ ನೆಕ್ಕಲು ಒತ್ತಾಯಿಸಿದ ಬಿಜೆಪಿ ನಾಯಕಿಯ ಬಂಧನ
ರಾಂಚಿ ಆಗಸ್ಟ್ 31: ಜಾರ್ಖಂಡ್‌ನಲ್ಲಿ ಬುಡಕಟ್ಟು ಮನೆಕೆಲಸದಾಕೆಯೊಬ್ಬರಿಗೆ ಚಿತ್ರಹಿಂಸೆ ನೀಡಿದ ಬಿಜೆಪಿ ನಾಯಕಿ ಸೀಮಾ ಪಾತ್ರಾಳನ್ನು ಬಂಧಿಸಲಾಗಿದೆ. ಕೆಲಸದಾಕೆಯನ್ನು ಮನೆಯಲ್ಲಿ ಬಂಧಿಸಿ ಅಮಾನುಷವಾಗಿ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ.
ಸೀಮಾ ಪಾತ್ರಾ ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿ. ಸೀಮಾ ಪಾತ್ರಾ ಮನೆಯ ಕೆಲಸದಾಕೆಯ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಾರಿಯಾಗಿದ್ದ ಸೀಮಾ ಪತ್ರಾರನ್ನು ಬುಧವಾರ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಬಂಧನಕ್ಕೆ ಹೆದರಿ ಸೀಮಾ ಪರಾರಿಯಾಗಿದ್ದರು. ರಾಂಚಿಯ ಅರ್ಗೋರಾ ಪೊಲೀಸರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಇಂದು (ಆಗಸ್ಟ್ 31) ಮುಂಜಾನೆ ಬಂಧಿಸಲಾಗಿದೆ.
ಮನೆಕೆಲಸದಾಕೆಯನ್ನು ಸುನೀತಾ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಸುನೀತಾ ತಾನು ಅನುಭವಿಸಿದ ಸಂಕಷ್ಟವನ್ನು ವಿವರವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಸೀಮಾ ಪಾತ್ರಾ ಕೆಲವೊಮ್ಮೆ ತನ್ನನ್ನು ಬಿಸಿ ಪಾತ್ರೆಗಳಿಂದ ಸುಡುತ್ತಿದ್ದರು. ರಾಡ್‌ನಿಂದ ಹಲ್ಲುಗಳನ್ನು ಮುರಿದು ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿದ್ದರು ಎಂದು ಆರೋಪಿಸಿದ್ದಾರೆ.
ಊಟವನ್ನು ನೀಡಿದೇ ಹಿಂಸೆ ನೀಡಲಾಗುತ್ತಿತ್ತು. ಸೀಮಾ ಪಾತ್ರಾ ಸಂತ್ರಸ್ತೆಗೆ ಮೂತ್ರವನ್ನು ನಾಲಿಗೆಯಿಂದ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾಳೆ. ಶೌಚಾಲಯವನ್ನು ನಾಲಿಗೆಯಿಂದ ಸ್ವಚ್ಚಗೊಳಿಸುವಂತೆ ಒತ್ತಾಯಿಸಿದ ಆರೋಪವಿದೆ. ಕಳೆದ 8 ವರ್ಷಗಳಿಂದ ಆಕೆಯ ಮೇಲೆ ಇದೇ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ದೇಹದಾದ್ಯಂತ ಅನೇಕ ಗಾಯದ ಗುರುತು
ಅಕ್ಕಪಕ್ಕದ ಮನೆಯವರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ. ಬುಡಕಟ್ಟು ಮಹಿಳೆಯಾದ ಸುನೀತಾ ಅವರ ದೇಹದಾದ್ಯಂತ ಅನೇಕ ಗಾಯಗಳಾಗಿವೆ. ಸೀಮಾ ಪಾತ್ರಾ ಮಗ ಆಯುಷ್ಮಾನ್ ಸೇವಕಿಯನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಅವರು ತಮ್ಮ ಸ್ನೇಹಿತ ವಿವೇಕ್ ಬಾಸ್ಕೆಗೆ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾರೆ. ಸುನೀತಾ ಕೊನೆಗೆ ವಿವೇಕ್‌ಗೆ ತನ್ನ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಕೊನೆಗೆ ವಿವೇಕ್ ಸಹಾಯದಿಂದ ಸುನೀತಾ ರಕ್ಷಿಸಲ್ಪಟ್ಟಿದ್ದಾಳೆ.

ರಿಮ್ಸ್ ನಲ್ಲಿ ಸಂತ್ರಸ್ತೆಗೆ ಚಿಕಿತ್ಸೆ
ಜಾರ್ಖಂಡ್‌ನ ಗುಮ್ಲಾದ ಸಂತ್ರಸ್ತೆ ಸುನೀತಾ ಸುಮಾರು 10 ವರ್ಷಗಳಿಂದ ಸೀಮಾ ಪಾತ್ರಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಕ್ಕಪಕ್ಕದ ಮನೆಯವರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಸುನೀತಾಳನ್ನು ಬಿಡುಗಡೆಗೊಳಿಸಿದ್ದಾರೆ. ಸಂತ್ರಸ್ತೆ ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೀಮಾ ಪಾತ್ರಾ ಅವರು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿ ಸಮಿತಿಯ ಸದಸ್ಯೆ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ವಿಷಯ ಬೆಳಕಿಗೆ ಬಂದ ನಂತರ ಬಿಜೆಪಿ ಪಾತ್ರಾ ಅವರನ್ನು ಅಮಾನತು ಮಾಡಲಾಗಿದೆ.

ಸೂಕ್ತ ಕ್ರಮಕ್ಕೆ ಮಹಿಳಾ ಆಯೋಗ ಒತ್ತಾಯ
ಪೊಲೀಸರು ರಾಂಚಿಯ ಅರ್ಗೋಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆ, 1989 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಇದರೊಂದಿಗೆ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸಿದೆ. ಜಾರ್ಖಂಡ್‌ನಲ್ಲಿ ಸೀಮಾ ಪಾತ್ರಾ ತನ್ನ ಮನೆಗೆಲಸದಾಕೆಗೆ ಕಿರುಕುಳ ನೀಡಿದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಮನಕ್ಕೆ ತೆಗೆದುಕೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಕೇಳಿದೆ. ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.

ನ್ಯಾಯಯುತ ತನಿಖೆಗೆ ಮನವಿ
ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಹೇಳಿಕೆಯಲ್ಲಿ, ಸಮಿತಿಯು ಜಾರ್ಖಂಡ್‌ನ ಡಿಜಿಪಿಗೆ ಪತ್ರ ಬರೆದಿದ್ದು, ಆರೋಪ ನಿಜವೆಂದು ಕಂಡುಬಂದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ. ಮಹಿಳಾ ಆಯೋಗ ಈ ವಿಷಯದಲ್ಲಿ ನ್ಯಾಯಯುತ ತನಿಖೆ ನಡೆಸಬೇಕು ಎಂದೂ ಪತ್ರ ಬರೆದಿದೆ ಎಂದು ಹೇಳಿದರು.
ಮಹಿಳಾ ಆಯೋಗ ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು ಎಂದು ಕೋರಿದೆ ಮತ್ತು ಅವಳ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದೆ. ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮವನ್ನು ಏಳು ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.












Click it and Unblock the Notifications