ಯಡಿಯೂರಪ್ಪ ಪರ ಡಿಸಿಎಂ ಅಶ್ವಥ್ ನಾರಾಯಣ ಬ್ಯಾಟಿಂಗ್
ರಾಮನಗರ, ಜೂನ್ 17: "ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ಬಿಜೆಪಿ ಪಕ್ಷದ ಹೆಸರಿನಲ್ಲಿ ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ,'' ಎಂದು ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ, "ಬಿಜೆಪಿ ಪಕ್ಷದ ಶಕ್ತಿಯ ಮೇಲೆ ನಾವು ಚುನಾವಣೆ ಮಾಡ್ತೇವೆ. ಎಲ್ಲರೂ ಸಹ ಬಿಜೆಪಿ ಪಕ್ಷದ ಅಡಿಯಲ್ಲಿ, ನೆರಳಲ್ಲಿ ಹೋಗುತ್ತೇವೆ. ಮುಂದಿನ ಚುನಾವಣೆಯ ನಾಯಕತ್ವದ ಬಗ್ಗೆ ಪಕ್ಷ ತಿಳಿಸಲಿದೆ. ಬಿಜೆಪಿ ಪಕ್ಷಕ್ಕೆ ಅಂತಹ ಶಕ್ತಿಯಿದೆ,'' ಎಂದು ಹೇಳಿದರು.
ನದಿ ಮೂಲದಿಂದ ನೀರೊದಗಿಸುವ ಜಲ ಜೀವನ್ ಮಿಷನ್ 2 ವರ್ಷದಲ್ಲಿ ಪೂರ್ಣ

ಯಾವುದೇ ಗೊಂದಲ ಇಲ್ಲ
"ಆದರೆ ಈಗ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ನಾನು ಸಚಿವನಾಗಿದ್ದೇನೆ. ಈಗ ಅವರ ನೇತೃತ್ವದಲ್ಲಿಯೇ ಸರ್ಕಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಅವರ ನಾಯಕತ್ವದಲ್ಲಿಯೇ ಮುಂದುವರೆಯಲಿದೆ ಎಂದ ಅವರು, ಇದರಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು, ಉಸ್ತುವಾರಿಗಳು ತಿಳಿಸಿದ್ದಾರೆ,'' ಎಂದು ಪ್ರತಿಕ್ರಿಯಿಸಿದರು.

ನನ್ನ ಸ್ಥಾನದ ಮೇಲೆ ಯಾರಾದರೂ ಆಸೆ ಇಟ್ಟುಕೊಳ್ಳಲಿ
ರಾಮನಗರ ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ ಕುರಿತು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, "ನಾನು ಜೋತಿಷಿ ಅಲ್ಲ. ಮುಂದಿನ ವಿಚಾರದ ಬಗ್ಗೆ ಹೇಳಲು ಆಗಲ್ಲ. ಈಗ ಮುಖ್ಯಮಂತ್ರಿಗಳು ನನಗೆ ಅವಕಾಶ ಕೊಟ್ಟಿದ್ದಾರೆ. ನಾನು ಪ್ರಾಮಾಣಿಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಸ್ಥಾನದ ಮೇಲೆ ಯಾರಾದರೂ ಆಸೆ ಇಟ್ಟುಕೊಳ್ಳಲಿ, ಅದರಲ್ಲಿ ತಪ್ಪಿಲ್ಲ. ಅವರು ಆ ಸ್ಥಾನ ಪಡೆಯುವ ಶಕ್ತಿ ಬೆಳೆಸಿಕೊಳ್ಳಲಿ. ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಲಿ,'' ಎಂದರು.

ರೋಟರಿ- ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ
ಕೋವಿಡ್ ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ- ಬಿಜಿಎಸ್ ಆಸ್ಪತ್ರೆಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ, "ರೋಟರಿ- ಬಿಜಿಎಸ್ ಆಸ್ಪತ್ರೆ ಬಹಳ ಹಿಂದಿನಿಂದಲೂ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿತ್ತು. ಈಗ ಅದನ್ನು ಮತ್ತಷ್ಟು ಉತ್ತಮಪಡಿಸಲಾಗಿದೆ. ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ,'' ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮನವಿ
"ರಾಮನಗರದ ರೋಟರಿ ಬಿಜಿಎಸ್ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ವ್ಯವಸ್ಥೆ ಇದೆ. ಈ ಆಸ್ಪತ್ರೆಗೆ 15 ವೆಂಟಿಲೇಟರ್, ಮಾನಿಟರ್‌ಗಳನ್ನು ನೀಡಲಾಗಿದೆ. ಇನ್ನೂ 15 ಮಾನಿಟರ್‌ಗಳು ಬೇಕೆಂದು ಕೇಳಿದ್ದಾರೆ. ಅದನ್ನೂ ವೈಯಕ್ತಿಕವಾಗಿ ಒದಗಿಸುತ್ತೇನೆ. ಇನ್ನು ಮುಂದೆ ರಾಮನಗರ ಜಿಲ್ಲೆಯ ಜನರು ಅನಾರೋಗ್ಯ ಉಂಟಾದ ಕೂಡಲೇ ಬೆಂಗಳೂರು ಕಡೆ ಓಡುವ ಅಗತ್ಯವಿಲ್ಲ ಎಂದು,'' ಉಪ ಮುಖ್ಯಮಂತ್ರಿ ಹೇಳಿದರು.
"ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೂ ಜಿಲ್ಲಾ ಕೇಂದ್ರದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದೇನೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಬೆಂಗಳೂರಿನಲ್ಲಷ್ಟೇ ಅಲ್ಲ, ವಿದೇಶದಲ್ಲೂ ಸಿಗುವಂಥ ಉತ್ತಮ ಆರೋಗ್ಯ ಸೇವೆ ರಾಮನಗರದಲ್ಲೂ ಸಿಗುತ್ತದೆ ಎಂದು,'' ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶೇಖರ ಸ್ವಾಮೀಜಿ ಸೇರಿದಂತೆ ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ, ಎಸ್ಪಿ ಗಿರೀಶ್ ಭಾಗವಹಿಸಿದ್ದರು.