ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸರ್ವೀಸ್ ರಸ್ತೆಯ ಸಮಸ್ಯೆಗಳೇನು?
ರಾಮನಗರ, ಮೇ 29: ಬೆಂಗಳೂರು ಮತ್ತು ಮೈಸೂರು ಎಕ್ಸ್‌ಪ್ರೆಸ್ ವೇ ಕುರಿತಂತೆ ಆರೋಪ ಪ್ರತ್ಯಾರೋಪಗಳು ಇದ್ದೇ ಇವೆ. ಇದೆಲ್ಲದರ ನಡುವೆಯೂ ವಾಹನಗಳು ಸಂಚರಿಸುತ್ತಲೇ ಇದೆ. ಈ ನಡುವೆ ಹೆದ್ದಾರಿಯ ಸರ್ವೀಸ್ ರಸ್ತೆ ಕುರಿಂತಂತೆ ದೂರುಗಳು ಕೇಳಿ ಬರುತ್ತಿವೆ.
ದ್ವಿಚಕ್ರ ವಾಹನ ಸವಾರರಿಗೆ ಸರ್ವೀಸ್ ರಸ್ತೆಯೇ ಗತಿಯಾಗಿರುವುದರಿಂದ ಸರ್ವೀಸ್ ರಸ್ತೆಯ ಸಮಸ್ಯೆಗಳು ಹೆಚ್ಚು ಕಾಡುತ್ತಿವೆ.

ಈ ಬಾರಿಯ ಮಳೆಗಾಲ ಕಳೆದು ಯಾವುದೇ ತೊಂದರೆಗಳು ಆಗದಿದ್ದರೆ ಎಕ್ಸ್‌ಪ್ರೆಸ್ ವೇ ಪರ್ಫೆಕ್ಟ್ ಅಂಥ ಹೇಳಬಹುದು. ಆದರೆ ಕಾಮಗಾರಿ ಇನ್ನೂ ಕೂಡ ಸಂಪೂರ್ಣವಾಗಿ ಆಗಿಲ್ಲ. ಹೀಗಾಗಿ ಅಲ್ಲಲ್ಲಿ ಒಂದಲ್ಲ ಒಂದು ರೀತಿಯ ಕಾಮಗಾರಿಗಳು ನಡೆಯುತ್ತಲೇ ಇದೆ.
ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು ಇದರ ಪರಿಣಾಮವನ್ನು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸರ್ವೀಸ್ ರಸ್ತೆಯ ಅಕ್ಕಪಕ್ಕದಲ್ಲಿರುವ ಗ್ರಾಮಗಳ ಗ್ರಾಮಸ್ಥರು ಎದುರಿಸುವಂತಾಗಿದೆ. ಇದೀಗ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ದಾಸಪ್ಪನದೊಡ್ಡಿ ಗ್ರಾಮದ ಕೆರೆಯ ಬಳಿ ಬೆಂಗಳೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳ ಮಿಶ್ರಣದ ಸಹಿತ ವ್ಯರ್ಥ (ವೇಸ್ಟೇಜ್) ಮಣ್ಣನ್ನು ತಂದು ಸುರಿಯಲಾಗಿದೆ. ಇದರಿಂದ ಸರ್ವಿಸ್ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರಕ್ಕೆ ಸಂಚಕಾರ ಬಂದಿದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ.

ನಿಷ್ಪ್ರಯೋಜಕ ಮಣ್ಣನ್ನು ತಂದು ಸುರಿದಿದ್ದೇಕೆ?
ವ್ಯರ್ಥ ಮಣ್ಣನ್ನು ಸುರಿದ ಕಾರಣ ಏಕಕಾಲದಲ್ಲಿ ಎರಡು ವಾಹನಗಳು ದಾಟಲು ಸಾಧ್ಯವಾಗದೆ ತೊಂದರೆ ಎದುರಿಸುವಂತಾಗಿದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿ ಚಲಿಸುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿರುವ ಬಗ್ಗೆಯೂ ದೂರುಗಳಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸೂಚನೆ ಮೇರೆಗೆ ಡಿಎಲ್‌ಬಿ ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯೇ ನಿಷ್ಪ್ರಯೋಜಕ ಕಲ್ಲು-ಮಣ್ಣು, ತೆರವುಗೊಳಿಸಿದ ಡಾಂಬರ್ ತ್ಯಾಜ್ಯವನ್ನು ಸಹ ರಸ್ತೆಯಲ್ಲಿ ತಂದು ಸುರಿದಿದ್ದಾರೆ ಎಂದು ಹೇಳಲಾಗಿದೆ.
ದಶಪಥ ಹೆದ್ದಾರಿಗೆ ಭೂಸ್ವಾಧೀನವಾಗಿರುವ ದಾಸಪ್ಪನದೊಡ್ಡಿ ಕೆರೆಯ ಏರಿ ಬಳಿ ಎಲ್ಲಿಂದಲೋ ತಂದ ತ್ಯಾಜ್ಯ ಸುರಿದಿದ್ದೇಕೆ ಎಂದು ಪ್ರಶ್ನಿಸುತ್ತಿರುವ ಗ್ರಾಮಸ್ಥರು ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆಯಾಗಿ ಮಾರ್ಪಟ್ಟಿರುವುದರ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇನ್ನು ಬಿಡದಿ ಪುರಸಭೆ 1ನೇ ವಾರ್ಡ್ ವ್ಯಾಪ್ತಿಯ ಕಲ್ಲುಗೋಪಹಳ್ಳಿ ಮತ್ತು ದಾಸಪ್ಪನದೊಡ್ಡಿ ಗ್ರಾಮಗಳ ನಡುವೆ ಇರುವ ದಾಸಪ್ಪನ ಕೆರೆಯ ಜಾಗವನ್ನು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ರಸ್ತೆ ಬದಿಯ ಕಲ್ಲು ಮಣ್ಣು ತೆರವಿಗೆ ಆಗ್ರಹ
ಇಲ್ಲಿ ಕಾಮಗಾರಿ ವೇಳೆ ಕೆರೆಯ ಕೋಡಿ ಮುಚ್ಚಿದ್ದು ರಸ್ತೆಯ ಕಡೆಗೆ ಏರಿಯನ್ನು ಎತ್ತರಿಸಲಾಗಿದೆ. ಮಳೆಗಾಲದಲ್ಲಿ ದಾಸಪ್ಪನ ಕೆರೆಯನ್ನು ಇನ್ನಷ್ಟು ಭರ್ತಿ ಮಾಡುವ ಸಲುವಾಗಿ ಕೆರೆಯ ಏರಿಯ ಬುಡದಲ್ಲಿ ವ್ಯರ್ಥ ಮಣ್ಣನ್ನು ತಂದು ಸುರಿಯಲಾಗಿದೆ ಎಂದು ಹೇಳಲಾಗುತ್ತಿದ್ದು, ಆದರೆ ಈ ಮಣ್ಣು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯ ಕಾರಿಯಾಗಿದ್ದು, ಇದನ್ನು ಹೀಗೆಯೇ ಬಿಟ್ಟರೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿದ್ದು, ಆದುದರಿಂದ ಕೂಡಲೇ ವೇಸ್ಟೇಜ್ ಕಲ್ಲು ಮಣ್ಣನ್ನು ತೆರವುಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ರಾಮನಗರ ತಾಲೂಕಿನ ದಾಸಪ್ಪನದೊಡ್ಡಿ ಕೆರೆಯ ಏರಿ ತಟದಲ್ಲಿರುವ ನಮ್ಮ ಜಮೀನಿನ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವ್ಯರ್ಥ ಕಲ್ಲು ಮಣ್ಣನ್ನು ತಂದು ಸುರಿದು ಎರಡು ತಿಂಗಳಾಗಿದೆ. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಚಲಿಸುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದಲ್ಲ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.












Click it and Unblock the Notifications