ಅನುಚಿತ ವರ್ತನೆ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನೌಕರನಿಗೆ ಗೂಸಾ
ರಾಮನಗರ, ನವೆಂಬರ್.30 : ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಿಬ್ಬಂದಿ ಹಣ ಕಟ್ಟಲು ಸೇವಾಕೇಂದ್ರಕ್ಕೆ ಬಂದ ಬಾಲಕನ ಬಟ್ಟೆ ಬಿಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕಲೂರು ಗ್ರಾಮದಲ್ಲಿ ನಡೆದಿದೆ.
ಚಕ್ಕೂರು ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿಗೆ ಬೆಳಿಗ್ಗೆ 12 ವರ್ಷದ ಮಿಥುನ್ ಎಂಬ ಬಾಲಕ ಹಣ ಕಟ್ಟಲು ಹೋಗಿದ್ದಾನೆ. ಈ ವೇಳೆ ಸಂಘದ ಕಚೇರಿಯಲ್ಲಿದ್ದ ರೇವಣಸಿದ್ದೇಶ್ವರ ಎಂಬ ನೌಕರ ಕಚೇರಿಯ ಬಾಗಿಲು ಹಾಕಿ ಬಾಲಕನ ಬಟ್ಟೆ ಬಿಚ್ಚಿ ಅದನ್ನ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಎಲ್ಲಿಯೂ ಹೇಳಬಾರದು ಎಂದು ತಾಕೀತು ಮಾಡಿದ್ದಾನೆ. ಬಾಲಕ ಮಿಥುನ್ ತನ್ನ ತಂದೆಗೆ ತಿಳಿಸಿ ಕರೆತರುತ್ತೆನೆ ಎಂದು ಹೇಳಿದ ನಂತರ ರೇವಣಸಿದ್ದೇಶ್ವರ ತನ್ನ ಮೊಬೈಲ್ ನಲ್ಲಿದ್ದ ವಿಡಿಯೋವನ್ನ ಡಿಲೀಟ್ ಮಾಡಿದ್ದಾನೆ.

ಮನೆಗೆ ಮಗ ತಡವಾಗಿ ಬಂದಾಗ ಅತಂಕಗೊಂಡ ತಾಯಿ ಮಮತಾ ವಿಚಾರಿಸಿದ್ದಾಳೆ. ಬಾಲಕ ಮಿಥುನ್ ಕಚೇರಿಯಲ್ಲಿ ನಡೆದ ಎಲ್ಲ ವಿಷಯವನ್ನ ತಾಯಿಗೆ ಹೇಳಿದ್ದಾನೆ. ತಕ್ಷಣ ತಾಯಿ ಹಾಗೂ ಗ್ರಾಮಸ್ಥರು ಕ್ಷೇಮಾಭಿವೃದ್ಧಿ ಸಂಘದ ಕಚೇರಿ ಬಳಿ ಬಂದು ರೇವಣಸಿದ್ದೇಶ್ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಸಂಘದ ಮೇಲಾಧಿಕಾರಿಗಳನ್ನ ಕರೆಯಿಸಿ ಅವರಿಗೆ ಒಪ್ಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಧರ್ಮಸ್ಥಳದ ಕ್ಷೇಮಾಭಿವೃದ್ದಿ ಸಂಘದ ಮ್ಯಾನೇಜರ್ ನಾರಾಯಣ ಶೆಟ್ಟಿ, ನೌಕರನ ಅನುಚಿತ ವರ್ತನೆಗೆ ಗ್ರಾಮಸ್ಥರಲ್ಲಿ ಕ್ಷಮೆ ಕೋರಿದರು ಮತ್ತು ತಮ್ಮ ಸಂಸ್ಥೆಯ ನಿಯಮದಂತೆ ಆರೋಪಿಯ ಪೋಷಕರನ್ನು ಕರೆಯಿಸಿ ಅವರ ಮುಂದೆ ವಿಚಾರಣೆ ನಡೆಸಿ ತಪ್ಪಿಗೆ ತಕ್ಕ ಶಿಕ್ಷೆ ನೀಡುತ್ತೆವೆ ಎಂದು ತಿಳಿಸಿದರು.












Click it and Unblock the Notifications