ಡಿಕೆಶಿಗೆ ಹಳೆಯ ದಿನಗಳನ್ನು ನೆನಪು ಮಾಡಿಕೊಟ್ಟ ಯೋಗೇಶ್ವರ!

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ರಾಮನಗರ, ಅಕ್ಟೋಬರ್ 18 : ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಕದನ ನಡೆಯುತ್ತಿದೆ. ಕಾಂಗ್ರೆಸ್ ತೊರೆದಿರುವ ಶಾಸಕ ಸಿ.ಪಿ.ಯೋಗೇಶ್ವರ ಅವರು ಡಿಕೆಶಿ ಸಹೋದರರ ವಿರುದ್ಧ ತೊಡೆ ತಟ್ಟಿದ್ದಾರೆ.

ಮಂಗಳವಾರ ಚನ್ನಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಹಲ್‌ನಲ್ಲಿ ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ನಡೆಸಲಾಯಿತು. ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿ.ಪಿ.ಯೋಗೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಚನ್ನಪಟ್ಟಣದಲ್ಲಿ ಯೋಗೇಶ್ವರಗೆ ಡಿಕೆಶಿ ಸಹೋದರರ ಸವಾಲ್!

ಇದಕ್ಕೆ ತಿರುಗೇಟು ನೀಡಿರುವ ಯೋಗೇಶ್ವರ ಅವರು, 'ಜೆಡಿಎಸ್ ಕಾರ್ಯಕರ್ತರಿಗೆ ಹೆದರಿ ಕೆಂಗಲ್ ಬಳಿ ನಡುಗುತ್ತಾ ಕುಳಿತಿದ್ದ ಡಿ.ಕೆ.ಶಿವಕುಮಾರ್‌ಗೆ ಧೈರ್ಯ ತುಂಬಿ ತಾಲೂಕಿನೊಳಕ್ಕೆ ಕರೆತಂದಿದ್ದು ನಾನು' ಎಂದು ಹೇಳಿದ್ದಾರೆ.

 CP Yogeshwar

'ನೀರಾ ಚಳವಳಿಯ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹೇಗೆ ಕ್ಷೇತ್ರಕ್ಕೆ ಬರುತ್ತೀಯಾ? ಎಂದು ಸವಾಲು ಹಾಕಿದ್ದರು. ಕ್ಷೇತ್ರಕ್ಕೆ ಬರಲು ಅಂಜಿ ಕುಳಿತಿದ್ದ ಇವರನ್ನು ನಾನು ನನ್ನ ಕಾರಿನಲ್ಲಿ ಹೋಗಿ ಕರೆದುಕೊಂಡು ಬಂದೆ. ಹಿಂದಿನದನ್ನು ನೆನಪಿಸಿಕೊಂಡು ಮಾತನಾಡಲಿ' ಎಂದು ಎಚ್ಚರಿಸಿದರು.

ಡಿಕೆಶಿ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟ ಯೋಗೇಶ್ವರ?

'ನಾನು ಕನಕಪುರದ ಸಹೋದರರಂತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದವನಲ್ಲ. 25 ವರ್ಷಗಳಿಂದ ತೊಡೆ ತಟ್ಟಿಕೊಂಡೇ ರಾಜಕಾರಣ ಮಾಡಿಕೊಂಡು ಬಂದವನು. ಇವರ ರೀತಿ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಗುಲಾಮ ಗಿರಿ ರಾಜಕಾರಣವನ್ನು ನಾನು ಮಾಡಿದವನಲ್ಲ' ಎಂದು ಟೀಕಿಸಿದರು.

'ನನ್ನ ತಮ್ಮನನ್ನು ಎಂಪಿ ಮಾಡು ಎಂದು ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡಲು ನನ್ನ ಬಳಿಗೆ ಬಂದರೇ ಹೊರತು, ನಾನು ಅವರ ಬಳಿಗೆ ಹೋಗಿಲ್ಲ. ನನ್ನ ಬೆಂಬಲ ಇಲ್ಲದಿದ್ದರೆ ಅವರ ತಮ್ಮ ಡಿ.ಕೆ.ಸುರೇಶ್ ಸಂಸದನಾಗುತ್ತಿರಲಿಲ್ಲ. ಅವರ ಬಾಮೈದುನ ರವಿ ಎಂಎಲ್‌ಸಿ ಆಗುತ್ತಿರಲಿಲ್ಲ. ಇದೀಗ ನನ್ನ ವಿರುದ್ಧ ಮಾತನಾಡುವ ಡಿ.ಕೆ.ಸುರೇಶ್ ಅವತ್ತು ನನ್ನ ಸಹಕಾರ ಇಲ್ಲದೆ ಗೆದ್ದು ಬರಬೇಕಿತ್ತು' ಎಂದರು.

ಸಾಮೂಹಿಕ ರಾಜೀನಾಮೆಗೆ ಮುಂದಾದ ಯೋಗೇಶ್ವರ್ ಬೆಂಬಲಿಗರು

'ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತಿದೆ. ಕರ್ನಾಟಕ ಕಾಂಗ್ರೆಸ್ ಪಾಲಿಗೆ ಡಿ.ಕೆ.ಶಿವಕುಮಾರ್ ನೆಗೆಟಿವ್‌ ಥಾಟ್ಸ್. ಇವರ ಸ್ವಾರ್ಥಕ್ಕೆ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ ಪಕ್ಷದ ವರಿಷ್ಠರು ಎಚ್ಚೆತ್ತು ಕೊಳ್ಳದಿದ್ದರೆ ಇವರೇ ಪಕ್ಷವನ್ನು ಹಾಳುಮಾಡುತ್ತಾರೆ' ಎಂದರು.

'ನನ್ನ ಸಹೋದರ ಸಿ.ಪಿ.ರಾಜೇಶ್ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ್ದಾನೆ. ಅಧಿಕಾರವನ್ನು ಸಂವಿಧಾನ ಬದ್ಧವಾಗಿ ಪಡೆದು ಕೊಂಡಿದ್ದಾರೆ. ನಾನು ಒಮ್ಮೆ ರಾಜೀನಾಮೆ ಕೊಡಿಸಿದ್ದೆ. ಆದರೆ, ಇವರು ಅವನನ್ನು ಲಘುವಾಗಿ ಪರಿಗಣಿಸಿದ ಪರಿಣಾಮ ರಾಜೀನಾಮೆ ಹಿಂದಕ್ಕೆ ಪಡೆದ. ಕಾನೂನು ಪ್ರಕಾರ ಕೆಳಗಿಸಲು ಸಾಧ್ಯವಾದಲ್ಲಿ ಕ್ರಮ ಕೈಗೊಳ್ಳಲಿ' ಎಂದು ಹೇಳಿದರು.

'ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿರುವುದು ಬೆರಳೆಣಿಕೆ ಸಂಖ್ಯೆಯ ಕಾರ್ಯಕರ್ತರು ಮಾತ್ರ. ಕೆಲ ಮಂದಿ ಕುತೂಹಲದಿಂದ ಸಭೆಗೆ ಹೋಗಿದ್ದಾರೆ. ಮತ್ತೆ ಕೆಲವರು ಮಾಗಡಿ ಮತ್ತು ಕನಕಪುರದಿಂದ ಸಭೆಗೆ ಬಂದಿದ್ದಾರೆ. ನಿಜವಾದ ಕಾರ್ಯಕರ್ತರು ಯಾರೂ ಇವರ ಸಭೆಗೆ ಹೋಗಿಲ್ಲ' ಎಂದು ಲೇವಡಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Verbal war between Ramanagara district in-charge minister D.K.Shiva Kumar and Channapatna MLA CP Yogeshwar continues.C.P.Yogeshwar resigned for Congress party on October 14, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ