ರೇಷ್ಮೆ ನಗರಿಯಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ ಆಚರಣೆ
ರಾಮನಗರ, ಜನವರಿ 6: ನಾಡಿನೆಲ್ಲೆಡೆ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಸಾಗಿದೆ. ರೇಷ್ಮೆ ನಗರಿ ರಾಮನಗರದಲ್ಲೂ ವಿಷ್ಣು ದೇವಾಲಯಗಳಲ್ಲಿ ವಿಜೃಂಭಣೆ ಮನೆ ಮಾಡಿತ್ತು.
ನಗರದ ಕೆಂಪೇಗೌಡ ವೃತ್ತದ ಬಳಿ ಇರುವ ವೆಂಕಟರಮಣ ಸ್ವಾಮಿ ದೇವಾಲಯ, ಚನ್ನಪಟ್ಟಣದ ತಿರುಮಲ ದೇವಾಲಯಗಳಲ್ಲಿ ಸಂಭ್ರಮ ಕಳೆಕಟ್ಟಿತ್ತು. ಇಂದು ವಿಶೇಷವಾಗಿ ದೇವರ ದರ್ಶನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಗಲಿದೆ ಎಂಬ ನಂಬಿಕೆ ಇದ್ದು, ದೇವರ ದರ್ಶನ ಪಡೆಯಲು ಬೆಳಿಗ್ಗೆಯಿಂದ ಭಕ್ತ ಸಾಗರ ಹರಿದು ಬಂತು.
ಬೆಳಿಗ್ಗೆ 4.30ರಿಂದಲೇ ಪೂಜೆ ಆರಂಭವಾಗಿದೆ. ದೇವರನ್ನು, ದೇವಾಲಯವನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಶನಕ್ಕೆ ಬಂದಿರುವ ಎಲ್ಲಾ ಭಕ್ತರಿಗೂ ಪ್ರಸಾದವಾಗಿ ಲಾಡುಗಳನ್ನು ವಿತರಿಸಲಾಯಿತು. ದೇವಾಲಯದ ಪಕ್ಕದಲ್ಲೇ ಭಕ್ತರಿಗೆ ವೈಕುಂಠ ದ್ವಾರ ಪ್ರವೇಶ ಮಾಡಲಾಗಿತ್ತು.

ಮುಕ್ಕೋಟಿ ಏಕಾದಶಿ ಎಂದೇ ಹೆಸರಾಗಿರುವ ಇಂದು ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದರೆ ಎಲ್ಲಾ ಪಾಪಗಳು ನಾಶವಾಗಿ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಅಂತೆಯೇ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ವೈಕುಂಠ ದ್ವಾರ ಪ್ರವೇಶ ಮಧ್ಯರಾತ್ರಿ ಸಮಯದವರೆಗೆ ನಡೆಯಲಿದೆ.












Click it and Unblock the Notifications