ರಾಮನಗರದ ಬಳಿ ಅವೈಜ್ಞಾನಿಕ ರಸ್ತೆ ಕಾಮಗಾರಿ; ಗಡ್ಕರಿ ಭೇಟಿಗೆ ಮುಂದಾದ ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಆಗಸ್ಟ್ 28: ರಾಮನಗರದ ಬಳಿ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಾಣವಾಗಿರುವ ದಶಪಥ ರಾಷ್ಟ್ರೀಯ ಹೆದ್ದಾರಿ 275ರ ಕಾಮಾಗಾರಿ ಅವೈಜ್ಞಾನಿಕವಾಗಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆ ಕಾಮಗಾರಿಯ ನಿಜಬಣ್ಣ ಬಟಾ ಬಯಲಾಗಿದೆ. ಹಲವೆಡೆಗಳಲ್ಲಿ ನೀರು ಹರಿಯಲು ವ್ಯವಸ್ಥೆ ಮಾಡಿದ ಕಾಲುವೆಗಳು ಹಾಗೂ ದೊಡ್ಡ ದೊಡ್ಡ ಹಳ್ಳಗಳನ್ನು ಮುಚ್ಚಿಲಾಗಿದೆ. ಪರಿಣಾಮ ಜಿಲ್ಲೆಯ ಕಣಮಿಣಿಕೆ ಗೇಟ್‌ನಿಂದ ಚನ್ನಪಟ್ಟಣದ ಕೋಲೂರು ಗೇಟ್‌ವರೆಗೆ ಹಲವು ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.
ಬೆಂಗಳೂರು -ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿ ನಡೆದಿವೆ. ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಕೇಂದ್ರ ಸರ್ಕಾರದ ಮಟ್ಟದಲ್ಲೇ ತಪ್ಪುಗಳನ್ನ ಸರಿಪಡಿಸುವ ನಿರ್ಧಾರ ಆಗಬೇಕು. ಟೆಕ್ನಿಕಲ್ ಪ್ರಾಬ್ಲಂ ಸರಿಪಡಿಸಿಕೊಳ್ಳಲು ಕೇಂದ್ರದ ಅನುಮತಿ ಬೇಕಿದೆ. ಹಾಗಾಗಿ ಸೆಪ್ಟೆಂಬರ್ 5ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅವೈಜ್ಞಾನಿ ರಸ್ತೆ ಕಾಮಗಾರಿಯ ಬಗ್ಗೆ ಚರ್ಚೆ ಮಾಡಿ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ರಾಮನಗರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ರಸ್ತೆ ದುರಸ್ತಿ ವಿಚಾರವಾಗಿ ಚರ್ಚಿಸಲು ಸೆಪ್ಟೆಂಬರ್ 5ರಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ
ಮೊದಲ ಹಂತದ ದಶಪಥ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ನೀರು ನಿಂತಿದ್ದು, ಅನಾಹುತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯೇ ಕಾರಣ. ಕಣ್ಮಿಣಿಕಿಯಿಂದ ನಿಡಘಟ್ಟವರೆಗೆ ಅನಾಹುತಗಳು ಸಂಭವಿಸಿವೆ. ಇದರ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದೆನೆ. ನಿತಿನ್ ಗಡ್ಕರಿಯವರನ್ನ ಭೇಟಿ ಮಾಡಿ ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ಸರಿಪಡಿಸುವಂತೆ ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಸರ್ವೀಸ್ ರಸ್ತೆಯ ಅನಾಹುತಗಳನ್ನ ಕಣ್ಣಾರೆ ಕಂಡಿದ್ದೇನೆ. ಸರ್ವೀಸ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಂಡರ್ ಪಾಸ್‌ಗಳಲ್ಲಿ ಮೂರು, ನಾಲ್ಕು ಅಡಿ ಮಳೆ ನೀರು ನಿಂತು ತೊಂದರೆ ಆಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯನ್ನು ಮಾಡಿದ್ದ ಡಿಬಿಎಲ್ ಕಂಪನಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ಪ್ರತಾಪ್ ಸಿಂಹಗೆ ಹೆಚ್‌ಡಿಕೆ ತರಾಟೆ
ದಶಪಥ ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಪ್ರತಾಪ್ ಸಿಂಹ ಫೇಸ್‌ಬುಕ್ ಲೈವ್‌ನಲ್ಲಿ ವಾಕ್ ಥ್ರೂ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೆದ್ದಾರಿಯ ಕಾಮಗಾರಿ ಬಗ್ಗೆ ಸರ್ಟಿಫಿಕೇಟ್ ಕೊಡುವ ಕೆಲಸ ಅವರದಲ್ಲ. "1997ರಲ್ಲಿ ದೇವೇಗೌಡರು ಪ್ರಧಾನಿ ಆದ ಕಾಲದಲ್ಲಿ ಅಸ್ಸಾಂನಲ್ಲಿ ಒಂದು ಬ್ರಿಡ್ಜ್ ಕಟ್ಟಿಸಿಲು ಫೌಂಡೇಶನ್ ಹಾಕಿ ಕೆಲಸ ಪ್ರಾರಂಭಿಸಿದ್ದರು. ಆ ಸೇತುವೆ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ ಅಷ್ಟೇ." ಮಾಜಿ ಪ್ರಧಾನಿ ದೇವೇಗೌಡರು ಶಂಕುಸ್ಥಾಪನೆ ಮಾಡಿದ್ದ ಸೇತುವೆ ಮೇಲೆ ಮೋದಿ ಅವರು ನಡೆದುಕೊಂಡು ಹೋಗಿ ಫೋಸ್ ಕೊಟ್ಟ ದೃಶ್ಯ ಟಿವಿಯಲ್ಲಿ ತೋರಿಸಿದ್ದೀರಿ. "ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಹ ಹೆದ್ದಾರಿಯಲ್ಲಿ ಏಕಾಂಗಿಯಾಗಿ ಫೋಟೋ ತೆಗೆಸಿಕೊಂಡ ದೃಶ್ಯಗಳು ವೈರಲ್ ಆಗುತ್ತಿವೆ. ನಾನು ಪ್ರಧಾನಮಂತ್ರಿಗಳಿಗಿಂತ ಕಡಿಮೆ ಇಲ್ಲ, ಅವರಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿದ್ದೇನೆ ಅಂತ ತೋರಿಸಲು ಹೊರಟಿರಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅಧಿಕಾರಿಗಳಿಗೆ ಶಾಸಕ ಎ.ಮಂಜುನಾಥ್ ಕ್ಲಾಸ್
ಮಾಗಡಿ ವಿಧಾನ ಸಭಾ ವ್ಯಾಪ್ತಿಯ ಬಿಡದಿ ಬಳಿ ಅವೈಜ್ಞಾನಿಕ ಕಾಮಾಗಾರಿಯಿಂದ ಹಾನಿಗೊಳಗಾಗಿದ್ದ ಹಲವು ಪ್ರದೇಶಗಳಿಗೆ ಶಾಸಕ ಎ. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವೈಜ್ಞಾನಿಕ ಹೆದ್ದಾರಿ ಕಾಮಾಗಾರಿ ಮಾಡಿದ್ದ ಅಧಿಕಾರಿಗಳಿಗೆ ಫೋನ್ ಮಾಡಿ ತರಾಟೆಗೆ ತಗೆದುಕೊಂಡರು.
ಕಾಮಗಾರಿ ಪರಿಶೀಲನೆ ಮಾಡಿ ಎಂದು ಸೂಚನೆ
ಇತ್ತೀಚೆಗೆ ಕೇತುಗಾನಹಳ್ಳಿಯ ಕೆರೆ ನೀರು ಹಳ್ಳಕ್ಕೆ ಹರಿದು ಹೋಗಲು ಡಿಬಿಎಲ್ ಕಂಪನಿಯವರು ಕಿರು ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಇದೀಗ ಸೇತುವೆ ಕುಸಿತವಾಗಿದ್ದು, ಕುಸಿತಗೊಂಡಿರುವ ಸ್ಥಳ ಹಾಗೂ ಶೇಷಗಿರಿಹಳ್ಳಿಯ ಬಳಿ ಡಿಬಿಎಲ್ ಕಂಪನಿಯವರು ನಿರ್ಮಾಣ ಮಾಡಿರುವ ಟೋಲ್ ಪ್ಲಾಜಾದಲ್ಲಿ ನೀರು ತುಂಬಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ಕಾಮಗಾರಿ ಮಾಡಿದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಅಲ್ಲದೇ ರಾಮನಗರ ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್ ಮೆನೆನ್ ರಾಜೇಂದ್ರನ್ ಅವರ ಜೊತೆಗೆ ಶಾಸಕ ಮಂಜುನಾಥ್ ಫೋನ್‌ನಲ್ಲಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದರು. ಮೊದಲು ಸ್ಥಳ ಪರಿಶೀಲನೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವಿಚಾರವಾಗಿ ಮಾತನಾಡಿದ ಮಾಗಡಿ ಶಾಸಕ ಎ.ಮಂಜುನಾಥ್, ಹೆದ್ದಾರಿ ಗುತ್ತಿಗೆ ಪಡೆದಿರುವ ಈ ಡಿಬಿಎಲ್ ಕಂಪನಿಯವರು ಯಾವುದನ್ನು ವೈಜ್ಞಾನಿಕವಾಗಿ ಕೆಲಸ ಮಾಡಿಲ್ಲ. ಎಲ್ಲವು ಅವೈಜ್ಞಾನಿಕತೆಯಿಂದ ಕೂಡಿದೆ. ಎಲ್ಲಿ ನೀರಿನ ಹರಿವು ಹೆಚ್ಚಾಗಿದೆಯೋ ಅಲ್ಲಿ ಯಾವ ರೀತಿ ಕಾಮಗಾರಿ ಮಾಡಬೇಕೆಂಬ ಯೋಜನೆಯನ್ನು ರೂಪಿಸಿಲ್ಲ. ಕೇತಗಾನಹಳ್ಳಿ ಬಳಿ ಕೆರೆಗೆ ಕಳೆದ 8 ದಿನಗಳ ಹಿಂದೆಯಷ್ಟೇ ನೀರು ಹೊರ ಹೋಗಲು ಪೈಪ್ ಅಳವಡಿಸಿದ್ದರು. ಆದರೆ ಅದು ಬಹಳ ದಿನ ಬಾಳಿಕೆ ಬರದೇ ಕುಸಿತ ಕಂಡಿದೆ. ಡಿಬಿಎಲ್ ಕಂಪನಿಯವರು ನಡೆದಿದ್ದೆ ದಾರಿ ಎಂಬಂತೆ ಕಾಮಗಾರಿ ಮಾಡಿದ್ದಾರೆ ಎಂದು ಹರಿಹಾಯ್ದರು.