ರಾಮನಗರ: ಹಾಡಹಗಲೇ ಮಹಿಳೆಯ ಚಿನ್ನದ ಸರ ಕದ್ದು ಪರಾರಿ
ರಾಮನಗರ, ಮೇ 28: ಗುರುವಾರ ಮಧ್ಯಾಹ್ನ ಬೈಕಿನಲ್ಲಿ ಬಂದ ದರೋಡೆಕೋರರು ಹಾಡುಹಗಲೇ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಮನಗರ ತಾಲ್ಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕೆಂಪೇಗೌಡನದೊಡ್ಡಿ ಗ್ರಾಮದ ರಾಜು ಎಂಬುವವರ ಪತ್ನಿ ಮಂಜುಳಾ ಚಿನ್ನದ ಸರ ಕಳೆದುಕೊಂಡ ಮಹಿಳೆ. ತಮ್ಮ ಗ್ರಾಮದಿಂದ ರಾಮನಗರಕ್ಕೆ ಕೆಲಸದ ನಿಮಿತ್ತ ಹೋಗಿ ವಾಪಸ್ ಊರಿಗೆ ಬಂದು ಮನೆಗೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬಂದ ದರೋಡೆಕೋರರು, ಮಂಜುಳಾ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತು, ಅದೇ ಬೈಕಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ. ಮಂಜುಳಾ ಅವರು ಪ್ರತಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಲಿಲ್ಲ.

ಸುಮಾರು 35 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ನಷ್ಟು ಕಾಸು, ಗುಂಡುಗಳು ಸೇರಿ ಒಟ್ಟು 43 ಗ್ರಾಂ ನಷ್ಟು ಚಿನ್ನದ ಸರವನ್ನು ಮಂಜುಳಾ ಕಳೆದುಕೊಂಡಿದ್ದಾರೆ. ಹಾಡಹಗಲೇ ನಡೆದ ಕೃತ್ಯದಿಂದ ಜನರಲ್ಲಿ ಭೀತಿ ಎದುರಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications