ಡಿಸಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಟೊಯೋಟಾ ಕಾರ್ಮಿಕರು
ರಾಮನಗರ, ಡಿಸೆಂಬರ್ 16: ಸಹೋದ್ಯೋಗಿಗಳ ಅಮಾನತು ಖಂಡಿಸಿ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಘಟಕದ ನೌಕರರು ನಡೆಸುತ್ತಿರುವ ಪ್ರತಿಭಟನೆ 38ನೇ ದಿನಕ್ಕೆ ಕಾಲಿಟ್ಟಿದೆ. ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ನೌಕರರು ತೀರ್ಮಾನಿಸಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಕಾರು ತಯಾರಿಕಾ ಕಂಪನಿ ಮತ್ತು ಕಾರ್ಮಿಕರ ನಡುವಿನ ತಿಕ್ಕಾಟ ಮುಂದುವರೆದಿದೆ. 38 ದಿನಗಳು ಕಳೆದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಜಿಲ್ಲಾಡಳಿತದ ನಡೆ ಖಂಡಿಸಿ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಕೆಲವು ಕಾರ್ಮಿಕರು ಕೆಲಸ ನಿರ್ವಹಿಸಲು ಹೋಗಿದ್ದಾರೆ. ಆದರೆ, ಮೇಲಧಿಕಾರಿಗಳ ಒತ್ತಡಗಳನ್ನು ತಾಳಲಾರದೆ ಮತ್ತೆ ವಾಪಸ್ ಬಂದು ಕಾರ್ಮಿಕರ ಜೊತೆಗಿನ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕಂಪನಿಯ ದಬ್ಬಾಳಿಕೆ ಇದೆ ಸಾಕ್ಷಿಯಾಗಿದೆ ಎಂದು ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ.

ಕಾರ್ಮಿಕರು ಬಹಳ ತಾಳ್ಮೆಯಿಂದ ಶಾಂತಿಯುತವಾಗಿ ಮುಷ್ಕರ ಮಾಡುತ್ತಿದ್ದಾರೆ. ಆದರೆ, ಯಾರೊಬ್ಬರು ನಮ್ಮ ಶಾಂತಿ ಸಹನೆಯನ್ನು ಬೆಂಬಲಿಸುತ್ತಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.
"ಡಿಸೆಂಬರ್ 18ರ ಶುಕ್ರವಾರ ಎಲ್ಲಾ ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರುಗಳು ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ" ಎಂದು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಕುಮಾರ್ ಘೋಷಣೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಕಾರ್ಮಿಕ ಸಂಘಟನೆಗಳು, ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದರು. ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿದ್ದರು. ಆದರೆ, ಇನ್ನೂ ಸಹ ಸಮಸ್ಯೆ ಬಗೆಹರಿದಿಲ್ಲ.
ಸರ್ಕಾರ ಮತ್ತು ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತಿಲ್ಲ ಎಂದು ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ ಮಾತ್ರ ಮುಂದುವರೆದಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿ, "ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜೊತೆ ಚರ್ಚಿಸಿ, ಆದಷ್ಟು ಶ್ರೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ' ಎಂದು ಹೇಳಿದ್ದರು.












Click it and Unblock the Notifications