Toll: ಬೆಂಗಳೂರು ಪ್ರವೇಶಿಸುವ ಈ ಪ್ರಮುಖ ರಸ್ತೆಯಲ್ಲೂ ಟೋಲ್ ಆರಂಭ
ಬೆಂಗಳೂರಿಗೆ ಈಗಾಗಲೇ ಸುತ್ತಲೂ ಟೋಲ್ ರಸ್ತೆಗಳಿವೆ. ನಗರ ಪ್ರವೇಶಿಸಲು ಒಂದಾದರೂ ಟೋಲ್ ರಸ್ತೆ ಮೂಲಕವೇ ಬರಬೇಕಿದೆ. ಆದರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಯಾವುದೇ ಟೋಲ್ ರಸ್ತೆ ಈವರೆಗೆ ಇರಲಿಲ್ಲ. ಇನ್ನು ಮುಂದೆ ಕನಕಪುರ ಮಾರ್ಗದಲ್ಲಿ ಸಂಚರಿಸುವವರು ಕೂಡ ಟೋಲ್ ಶುಲ್ಕ ಪಾವತಿಸಬೇಕಾಗಿದೆ. ಇಂದಿನಿಂದಲೇ ಟೋಲ್ ಸಂಗ್ರಹ ಶುರುವಾಗಿದ್ದು, ಬೆಂಗಳೂರಿಗೆ ಸದ್ಯ ನಾಲ್ಕು ದಿಕ್ಕಿನಿಂದಲೂ ಟೋಲ್ ರಸ್ತೆಗಳು ಆವರಸಿಕೊಂಡಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಿಕ ಹೆಚ್ಚಿನ ಟೋಲ್ ಹಣ ಪಾವತಿಸಬೇಕು ಎಂದು ಪ್ರಯಾಣಿಕರು ಹಲವು ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಈ ಪೈಕಿ ಬೆಂಗಳೂರು-ಕನಕಪುರ ರಸ್ತೆ ಕೂಡ ಒಂದು. ಈಗ ಕನಕಪುರ ಮಾರ್ಗದ ರಸ್ತೆಯಲ್ಲೂ ಟೋಲ್ ಕಟ್ಟಿಯೇ ವಾಹನಗಳು ಸಂಚರಿಸಬೇಕಾಗಿದೆ. ಕಗ್ಗಲೀಪುರದ ಸೋಮನಹಳ್ಳಿ ಬಳಿ ಟೋಲ್ ಗೇಟ್ ಶುರುವಾಗಿದ್ದು, ಕಾರುಗಳಿಗೆ 85 ರೂಪಾಯಿ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಶುಲ್ಕ ಇಲ್ಲ. ಆದರೆ ಈ ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಈ ಭಾಗದ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಇದರಿಂದ ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ. ಬೆಂಗಳೂರು-ಕನಕಪುರ-ಮಳವಳ್ಳಿ ಮಾರ್ಗದಲ್ಲಿ ಸರ್ವಿಸ್ ರಸ್ತೆಯೇ ಇಲ್ಲ. ಆದರೂ ಇಂದಿನಿಂದ ಟೋಲ್ ಪಾವತಿಸಿಯೇ ವಾಹನಗಳು ಓಡಾಡಬೇಕು ಎನ್ನಲಾಗಿದೆ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಆದರೂ ಅಲ್ಲಿನ ದುಬಾರಿ ಟೋಲ್ ದರಕ್ಕೆ ಹೆದರಿ ಈ ಮಾರ್ಗದಲ್ಲೇ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದವು. ಈಗ ಈ ರಸ್ತೆಯಲ್ಲೂ ಟೋಲ್ ವಿಧಿಸುತ್ತಿರುವುದು ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಎಕ್ಸ್‌ಪ್ರೆಸ್‌ವೇ ಬಳಿ ಸರ್ವಿಸ್ ರಸ್ತೆ ಇದ್ದರೂ ಹೆಚ್ಚಾಗಿ ಹಂಪ್ ಇದ್ದ ಕಾರಣಕ್ಕೆ ಹಾಗೂ ಸ್ಪೀಡ್ ಲಿಮಿಟ್ ಇದ್ದಿದ್ದರಿಂದ ಕಗ್ಗಲೀಪುರ-ಹಾರೋಹಳ್ಳಿ-ಕನಕಪುರ-ಮಳವಳ್ಳಿ ಮಾರ್ಗವಾಗಿ ಮೈಸೂರು ಬೆಂಗಳೂರು ನಡುವೆ ನೆಮ್ಮದಿಯಾಗಿ ಪ್ರಯಾಣ ಬೆಳೆಸುತ್ತಿದ್ದರು. ಇನ್ನು ಮುಂದೆ ಇಲ್ಲಿಯೂ ಟೋಲ್ ಕಟ್ಟಿಯೇ ಹೋಗಬೇಕಾಗಿದೆ.
ಕಾರು, ಜೀಪ್, ಲಘು ವಾಹನಗಳ ಏಕಮುಖ ಸಂಚಾರಕ್ಕೆ 85 ರೂಪಾಯಿ ಟೋಲ್ ಶುಲ್ಕ ನಿಗದಿ ಮಾಡಲಾಗಿದೆ. ಅದೇ ದಿನ ವಾಪಸ್ ಆದರೆ 130 ರೂಪಾಯಿ ನಿಗದಿಯನ್ನು ಮಾಡಲಾಗಿದೆ. ತಿಂಗಳ ಪಾಸ್‌ಗೆ 2,855 ರೂ ನಿಗದಿಯನ್ನು ಮಾಡಲಾಗಿದೆ. ಇನ್ನೂ ಅದೇ ಜಿಲ್ಲೆಯಲ್ಲಿ ಸಂಚರಿಸಲು ನೋಂದಣಿ ಮಾಡಿಕೊಂಡಿರುವ ವಾಣಿಜ್ಯ ವಾಹನಗಳಿಗೆ 45 ರೂಪಾಯಿ ನಿಗದಿ ಮಾಡಲಾಗಿದೆ. ಬಸ್, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 290 ರೂಪಾಯಿ ದರ ಇದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ದರ ಪಾವತಿಸಬೇಕು.
ಸೋಮನಹಳ್ಳಿ ಟೋಲ್ ನಿರ್ಮಾಣಕ್ಕೆ ಆರಂಭದಿಂದಲೂ ಸ್ಥಳೀಯರ ವಿರೋಧವಿತ್ತು. ಇದರ ವಿರುದ್ಧ ರೈತ ಸಂಘ ಕೂಡ ಹೋರಾಟ ನಡೆಸಿತ್ತು. ಅಲ್ಲದೆ 20 ಕಿ.ಮೀ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ವಾಣಿಜ್ಯೇತರ ವಾಹನಗಳಿಗೆ ಟೋಲ್ ಶುಲ್ಕ ಬೇಡ ಎಂದು ಆಗ್ರಹಿಸಿದ್ದರು. ಟೋಲ್ ಉದ್ಯೋಗದಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಬೇಡಿಕೆ ಇಟ್ಟಿದ್ದರು.












Click it and Unblock the Notifications