ಮಾಗಡಿ ಪಟ್ಟಣದಲ್ಲಿ ಬೀದಿ ನಾಯಿಗೆ ಬೆಚ್ಚದ ಧೀರರುಂಟೆ?!
ಮಾಗಡಿ, ಅಕ್ಟೋಬರ್ 28: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳು ಗುಂಪು ಗುಂಪಾಗಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದು, ಆಹಾರ ಸಿಗದಿದ್ದರೆ ಕರು, ಮೇಕೆ, ಕುರಿಗಳ ಮೇಲೆ ದಾಳಿ ಮಾಡಿ ತಿನ್ನುವ ಮಟ್ಟಕ್ಕೆ ಬಂದಿವೆ. ಇದರಿಂದ ಜನ ಭಯಗೊಂಡಿದ್ದಾರೆ.
ದನ-ಕರುಗಳ ಮೇಲೆ ದಾಳಿ ಮಾಡಿ, ಕರುಗಳನ್ನು ಕಚ್ಚಿ ಕೊಂದೇ ಹಾಕುವ ಈ ಬೀದಿ ನಾಯಿಗಳು ಮುಂದೆ ಮಕ್ಕಳ ಮೇಲೆಯೂ ದಾಳಿ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಶಾಲೆಗೆ ಹೋಗುವ ಮಕ್ಕಳು ಜೀವ ಕೈಲಿ ಹಿಡಿದು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನಗಳಲ್ಲಿ ತೆರಳುವವರನ್ನು ಅಟ್ಟಿಸಿಕೊಂಡು ಬರುತ್ತಿದ್ದರೆ, ಬೆಳಗಿನ ಜಾವ ಮನೆಗಳಿಗೆ ಪೇಪರ್ ಹಾಕುವವರಿಗೆ, ಹಾಲು ಹಾಕುವವರಿಗೂ ಸಾಕಷ್ಟು ತೊಂದರೆಯಾಗುತ್ತಿದೆ.
ಕೆಲವೊಮ್ಮೆ ದ್ವಿಚಕ್ರ ವಾಹನದಲ್ಲಿ ತೆರಳುವವರ ಮೇಲೆ ದಿಢೀರ್ ದಾಳಿ ಮಾಡುವುದರಿಂದಾಗಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ. ಈ ಬೀದಿ ನಾಯಿಗಳ ಹಾವಳಿಯಿಂದ ಮುಂಜಾನೆ ವಾಕಿಂಗ್ ತೆರಳುವವರು ಭಯದಲ್ಲೇ ಹೆಜ್ಜೆ ಹಾಕಬೇಕಾಗಿದೆ.
ಮೊದಲೆಲ್ಲ ನಾಯಿಗಳನ್ನು ಹಿಡಿದು ಕೊಲ್ಲುವುದು ಅಥವಾ ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತಿದ್ದರು. ಆದರೆ ನಾಯಿಗಳನ್ನು ಕೊಲ್ಲಲು ಪ್ರಾಣಿ ದಯಾ ಸಂಘದವರು ಬಿಡುತ್ತಿಲ್ಲ. ಜತೆಗೆ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶದ ಬಳಿ ಬಿಡಲೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ನಾಯಿಗಳ ಸಂತತಿ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಈಗಾಗಲೇ ಪಟ್ಟಣದ ವ್ಯಾಪ್ತಿಯಲ್ಲಿ ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿರುವ ಪ್ರಸಂಗಗಳು ಬಹಳಷ್ಟು ಇವೆ. ಇನ್ನಾದರೂ ಸಂಬಂಧಿಸಿದವರು ಗಮನಹರಿಸಿ ಮಾಗಡಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಮಕ್ಕಳು ಮಹಿಳೆಯರು, ಜಾನುವಾರುಗಳ ಮೇಲೆ ದಾಳಿ ನಡೆಸುವ ಬೀದಿ ನಾಯಿಗಳ ಅಟಾಟೋಪಕ್ಕೆ ಕಡಿವಾಣ ಹಾಕಬೇಕಾಗಿದೆ.












Click it and Unblock the Notifications