ರಾಮನಗರ ಹೆಸರು ಬದಲಾವಣೆ ವಿವಾದ; ಯಡಿಯೂರಪ್ಪ ಸ್ಪಷ್ಟನೆ
ರಾಮನಗರ, ಜನವರಿ 06 : ರಾಮನಗರದ ಹೆಸರನ್ನು 'ನವ ಬೆಂಗಳೂರು' ಎಂದು ಬದಲಾವಣೆ ಮಾಡುವ ವಿವಾದ ಸದ್ಯಕ್ಕೆ ತಣ್ಣಗಾಗಿದೆ. ಹೆಸರನ್ನು ಬದಲಾವಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ರಾಮನಗರದ ಹೆಸರು ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿತ್ತು. ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ #SaveRamanagara ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿದ್ದರು.
ಭಾನುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಅವರು, "ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಬಂಡವಾಳವನ್ನು ಆಕರ್ಷಣೆ ಮಾಡಲು ರಾಮನಗರದ ಹೆಸರನ್ನು 'ನವ ಬೆಂಗಳೂರು' ಎಂದು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ರಾಮನಗರ ಎಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯಾಗಿದೆ.

ಅನಾವಶ್ಯಕ ಚರ್ಚೆಯಾಗುತ್ತಿದೆ
"ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ. ಬಹುಶ: ಆ ಎರಡೂ ಪಕ್ಷಗಳ ನಾಯಕರು ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ
"ಶ್ರೀರಾಮನ ಬಗ್ಗೆ ನಮಗಿರುವ ಭಕ್ತಿ ಅಥವಾ ಅಭಿಮಾನವನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ.ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಈಗ ರಾಮನ ಬಗ್ಗೆ ಭಕ್ತಿ ಹುಟ್ಟಿರುವುದು ಆಶ್ಚರ್ಯಕರ. ಅವರ ಭಕ್ತಿ ನಿಜವಾಗಿದ್ದರೆ ಸ್ವಾಗತಾರ್ಹ. ಇಲ್ಲದ ವಿಷಯದ ಬಗ್ಗೆ ಆ ಪಕ್ಷಗಳ ನಾಯಕರು ಹೋರಾಡಲು ಹೊರಟಿರುವುದು ಹಾಸ್ಯಾಸ್ಪದ." ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಕುಮಾರಸ್ವಾಮಿ ವಿರೋಧಿಸಿದ್ದರು
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಮನಗರ ಹೆಸರು ಬದಲಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. "ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ" ಎಂದು ಟ್ವೀಟ್ ಮಾಡಿದ್ದರು.

ಅವರಿಗೆ ಮಾಡುವ ಅಪಮಾನ
ಎಚ್. ಡಿ. ಕುಮಾರಸ್ವಾಮಿ #SaveRamanagara ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. "ಕೆಂಗಲ್ ಹನುಮಂತಯ್ಯನವರು ರಾಮನಗರ ತಾಲೂಕು ಮಾಡಿದರು. ಅದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ" ಎಂದು ಹೇಳಿದ್ದರು.











Click it and Unblock the Notifications