ಕರ್ನಾಟಕದಲ್ಲಿ ಮತ್ತೆರಡು ಮೆಡಿಕಲ್ ಕಾಲೇಜು: ಯಾವ ನಗರಗಳಲ್ಲಿ ತಿಳಿಯಿರಿ. ಇಲ್ಲಿದೆ ವಿವರ
ರಾಮನಗರ, ನವೆಂಬರ್ 27: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿವಾದದ ನಡುವೆಯೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕಕ್ಕೆ ಇನ್ನೂ ಎರಡು ಸರ್ಕಾರಿ ವೈದ್ಯಕೀಯ ಕಾಲೇಜು ಸಿಗುವ ಸಾಧ್ಯತೆ ಇದೆ. ರಾಮನಗರ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ವಿಚಾರ ವಿವಾದವಾಗಿ ರೂಪುಗೊಂಡಿದ್ದು, ಇದೀಗ ಕನಕಪುರ ಹಾಗೂ ರಾಮನಗರ ಎರಡೂ ಕಡೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವ ಸಾಧ್ಯತೆ ಇದೆ.
ರಾಮನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕನಕಪುರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ತಲಾ 150 ಸೀಟುಗಳನ್ನು ಹೊಂದಿರುವ ಕಾಲೇಜು ಆರಂಭವಾಗಲಿದೆ. ಇನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮತ್ತೊಂದು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯ ಅದಕ್ಕೆ ಅನುಮೋದನೆ ಸಿಕ್ಕಿಲ್ಲ.

ಜನಸಂಖ್ಯೆಯ ಆಧಾರದ ಮೇಲೆ ಹೊಸ ಕಾಲೇಜುಗಳನ್ನು ಸೀಮಿತಗೊಳಿಸುವ ನಿರ್ಧಾರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಮುಂದೂಡಿದ ನಂತರ ಹೊಸ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಅರ್ಜಿ ಸಲ್ಲಿಸಲು ಕರೆ ನೀಡಿದೆ. ಈ ಹಿಂದೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಸೀಟುಗಳಿಗೆ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಮಿತಿಗೊಳಿಸಲು ನಿರ್ಧರಿಸಿತ್ತು. ಆದರೆ ಕರ್ನಾಟಕ ಸೇರಿದಂತೆ ರಾಜ್ಯಗಳ ವಿರೋಧದ ನಂತರ ಎನ್‌ಎಮ್‌ಸಿ ಈ ನಿರ್ಧಾರವನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿತು.
ಇನ್ನು ಈ ಬಾರಿಯ ವೈದ್ಯಕೀಯ ಸಂಸ್ಥೆಗಳು ಸೀಟುಗಳನ್ನು ಹೆಚ್ಚಿಸಲು ಅಥವಾ ಹೊಸ ಕಾಲೇಜುಗಳನ್ನು ಪ್ರಾರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗವು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 26 ರವರೆಗೆ ಅವಕಾಶ ನೀಡಿತ್ತು. ಇದೀಗ ಕರ್ನಾಟಕ ರಾಜ್ಯದಲ್ಲಿ ಎರಡು ಹೊಸ ಕಾಲೇಜುಗಳ ಆರಂಭಕ್ಕೆ ಅನುಮೋದನೆ ನೀಡಿದ್ದು, ಒಂದು ರಾಮನಗರದಲ್ಲಿ ಮತ್ತು ಇನ್ನೊಂದು ಕನಕಪುರದಲ್ಲಿ ಆರಂಭವಾಗಿದೆ. ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರಿದೆ ಎಂದು ಆರ್‌ಜಿಯುಎಚ್‌ಎಸ್ ವಿಸಿ ಎಂಕೆ ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಮನಗರದಲ್ಲಿ ಮೆಡಿಕಲ್ ಕಾಲೇಜು ವಿವಾದ ಆರಂಭವಾಯಿತು. ಎಚ್ ಡಿ ಕುಮಾರಸ್ವಾಮಿ ಕನಸಿನ ಯೋಜನೆಯಾಗಿದ್ದ ಮೆಡಿಕಲ್ ಕಾಲೇಜು ರಾಮನಗರದಿಂದ ಕನಕಪುರಕ್ಕೆ ಸ್ಥಳಾಂತರ ಆಗಿತ್ತು. ರಾಜಕೀಯ ಪ್ರತಿಷ್ಠೆಯಾಗಿ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ರಾಜಕೀಯ ನಾಯಕರು ಸೇರಿದಂತೆ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಪರ್ಧೆ ನೀಡಿ ರಾಮನಗರ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ಪಡೆಯಲಾಗಿತ್ತು. ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಕೆಲಸಗಳು ಆರಂಭವಾಗಿಲ್ಲ. ಬದಲಿಗೆ ಕನಕಪುರಕ್ಕೆ ಶಿಫ್ಟ್ ಆಗುವ ಸಿದ್ಧತೆಗಳು ಆರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೋರಾಟಗಳು ಆರಂಭವಾಗಿದ್ದವು. ರಾಮನಗರ ಬಂದ್ ಸೇರಿದಂತೆ ವಿವಿಧ ರೀತಿಯಲ್ಲಿ ಸ್ಥಳೀಯ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.












Click it and Unblock the Notifications