ದಶಪಥ ಹೆದ್ದಾರಿ: ಮುಂದುವರಿದ ಅವಘಡ, ಗೂಡ್ಸ್‌ನಲ್ಲಿ ಮೃತದೇಹ ಸಾಗಾಟ, ಅಧಿಕಾರಿಗಳ ವಿರುದ್ಧ ಭಾರೀ ಆಕ್ರೋಶ
ರಾಮನಗರ, ಏಪ್ರಿಲ್ 23: ಶನಿವಾರ ಮಧ್ಯಾಹ್ನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚನ್ನಪಟ್ಟಣ ಬಳಿ ನಡೆದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ ಘಟನೆಗೆ ಅವೈಜ್ಞಾನಿಕ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯದ ಸಮೀಪ ಶನಿವಾರ ಮಧ್ಯಾಹ್ನ ಮೈಸೂರು ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರಿನ ಟೈರ್ ಸಿಡಿದು ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಹಾರಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ಭೀಕರತೆಗೆ ಕಾರಿನಲ್ಲಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಹಾಗೂ ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ತುರ್ತಾಗಿ ತಲುಪಲು ಯಾವುದೇ ವ್ಯವಸ್ಥೆ ಇಲ್ಲ. ಅಲ್ಲದೇ ಹೆದ್ದಾರಿಯಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿಲ್ಲ. ಹಾಗಾಗಿ ಐದು ಜೀವಗಳನ್ನು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಬಲಿ ಪಡೆದಿದೆ ಎಂದು ಜನರು ಆರೋಪಿಸಿದ್ದಾರೆ.
ಗಾಯಗೊಂಡಿರುವ ಮಕ್ಕಳು ಹಾಗೂ ಅವರ ಪೋಷಕರನ್ನು ಗೂಡ್ಸ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಫೋಟೋಗಳನ್ನು ಟ್ಯಾಗ್ ಮಾಡಿ ದಶಪಥ ಹೆದ್ದಾರಿಯಲ್ಲಿ ತುರ್ತು ವಾಹನ ಬರಲು ಪ್ರವೇಶ ಮತ್ತು ನಿರ್ಗಮನ ಇಲ್ಲದ ಕಾರಣ ಅಪಘಾತ ನಡೆದ ಸ್ಥಳಕ್ಕೆ ಆಂಬ್ಯುಲೆನ್ಸ್ ಬರಲು ಸಾಧ್ಯವಾಗದೇ ಇಡೀ ಕುಟುಂಬ ಮೃತಪಟ್ಟಿದ್ದಾರೆ ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರತಾಪ್ ಸಿಂಹನ ಅವಿವೇಕತನ ಕಾರಣ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯದ ಸಮೀಪ ಕಾರು ಅಪಘಾತದಲ್ಲಿ ಗಂಡ ಹೆಂಡತಿ ಸೇರಿದಂತೆ ಮುದ್ದಾದ ಮೂರು ಮಕ್ಕಳ ದಾರುಣ ಸಾವಿಗೆ, ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಕಾರಣ ರಸ್ತೆಯಲ್ಲಿ ಬಿದ್ದು ನೋವಿನಿಂದ ನರಳಾಡಿದ ಆ ಮಕ್ಕಳ ಶಾಪ ತಟ್ಟುವುದಾದರೂ ಯಾರಿಗೆ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಭಿವೃದ್ಧಿ ಮಾಡಿದವರು ಸರಿಯಾದ ರೀತಿಯಲ್ಲಿ ಗುಣಮಟ್ಟದ ರಸ್ತೆ ಮಾಡಲಿಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಿಲ್ಲ ಅಪಘಾತ ಸಂಭವಿಸಿದ ವೇಳೆ ತಕ್ಷಣಕ್ಕೆ ಪ್ರಥಮ ಚಿಕಿತ್ಸಾ ಸಂಚಾರ ವಾಹನ ಅಥವಾ ಚಿಕಿತ್ಸಾ ಘಟಕ. ನಿರ್ಮಾಣದ ವ್ಯವಸ್ಥೆ ಮಾಡಲಿಲ್ಲ ಆದರೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಬಳಿ ಮಾತ್ರ ಹಣ ಪಡೆಯುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ನೀಡಿ ನಂತರ ಹಣ ಪಡೆಯುವಂತೆ ಕೇಳಲು ಹೋದರೆ ಪೊಲೀಸರಿಂದ ಎದುರಿಸಲು ಬರುತ್ತಾರೆ ಇದು ನಮ್ಮ ಪ್ರಜಾಪ್ರಭುತ್ವ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಇಂತಹ ದುರ್ಘಟನೆಗಳಿಗೆ ಸಂಸದ ಪ್ರತಾಪ್ ಸಿಂಹನ ಅವಿವೇಕತನ ಕಾರಣ. ಆತನಿಗೋ ಅಥವಾ ಅವರ ಕುಟುಂಬದವರಿಗೆ ಹೀಗಾದರೆ ಆ ನೋವು ಹೇಗಿರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಘಟನೆಯ ವಿವರ
ಟಿ.ನರಸೀಪುರ ಮೂಲದ ರವಿ ಪೂಜಾರ್ ರಾಜೀವ್ ಗಾಂಧಿ ವಿವಿ ಕರ್ತವ್ಯದಲ್ಲಿದ್ದು, ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಮೈಸೂರಿನ ಸಂಬಂಧಿಕರ ಮನೆಗೆ ತೆರಳುವ ವೇಳೆ ಚನ್ನಪಟ್ಟಣದ ಲಂಬಾಣಿ ತಾಂಡ್ಯದ ಬಳಿ ನಡೆದ ಭೀಕರ ಆಪಘಾತದಲ್ಲಿ ರವಿ ಪೂಜಾರ್ (46), ಲಕ್ಷ್ಮಿ ಪೂಜಾರ್ (40) ಇಂಚರ ಪೂಜಾರ್ (15), ಸಿರಿ ಪೂಜಾರ್ (3), ಶಾಂತಲಾ ಪೂಜಾರ್ (8) ಮೃತಪಟ್ಟಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ತೆರಳಲು ಪೊಲೀಸರು ಹಾಗೂ ಆಂಬ್ಯುಲೆನ್ಸ್ ಪರದಾಡಿದರು. ಅಪಘಾತದಲ್ಲಿ ರವಿ ಪೂಜಾರ್ ದಂಪತಿ ಹಾಗೂ ಮೂರು ಪುಟ್ಟ ಮಕ್ಕಳು ನೋವಿನಿಂದ ರಸ್ತೆಯಲ್ಲಿ ನರಳುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಗೂಡ್ಸ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಅದಾಗಲೇ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.











Click it and Unblock the Notifications