ಮೀಸಲಾತಿ ಹೋರಾಟ; ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ಏನು?
ರಾಮನಗರ, ಫೆಬ್ರವರಿ 7: "ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ ಹಾಗಾಗಿ ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, "ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ" ಎಂದರು.
"ಬಿಜೆಪಿ-ಜೆಡಿಎಸ್ ಮೈತ್ರಿ ಸಭಾಪತಿ ಸ್ಥಾನಕ್ಕಾಗಿ ಮಾತ್ರ ಮೈತ್ರಿಯಾಗಿದ್ದೇವೆ. ಅದನ್ನು ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ. ವಿಷಯಾಧಾರಿತವಾಗಿ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗುತ್ತೇವೆ. ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜೀ ಇಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿನ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಪ್ರಧಾನಮಂತ್ರಿಗಳಿಗೆ ರೈತರ ಬಗ್ಗೆ ಗೌರವ ಇದ್ದರೆ ಅವರನ್ನು ಕರೆದು ಸಭೆ ಮಾಡಬೇಕಿತ್ತು. ಕೃಷಿಮಂತ್ರಿಯನ್ನು ಬಿಟ್ಟು ಸಭೆ ಮಾಡಿಸುವ ಬದಲು ಇವರೇ ಸಭೆ ಮಾಡಲಿ" ಎಂದರು.
"ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನು? ಎಂದು ತಿಳಿಸಲಿ. ರೈತರ ಗೊಂದಲಗಳಿಗೆ ಮನವರಿಕೆ ಮಾಡಿಕೊಡಲಿ. ಈಗ ರೈತರು ಮುಂದಿನ ಅಕ್ಟೋಬರ್‌ವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮ ವಹಿಸಬೇಕು" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications