Bengaluru-Mysuru expressway: ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ: ನಿಖಿಲ್ ಕುಮಾರಸ್ವಾಮಿ ಪೊಲೀಸರ ವಶಕ್ಕೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಕಣಮಿಣಿಕಿ ಟೋಲ್ ಬಳಿ ನಿಖಿಲ್ ಕುಮಾರಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮನಗರ, ಮಾರ್ಚ್, 16: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಮಿಣಿಕಿ ಟೋಲ್ ಬಳಿ ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪೊಲೀಸರ ವಶಕ್ಕೆ
ಹಾಗೆಯೇ ಇದೇ ವೇಳೆ ಪೊಲೀಸರು ಮಾಗಡಿ ಶಾಸಕ ಎ.ಮಂಜು ಅವರನ್ನು ಸಹ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸತತ ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ಗಾಗಿ ನಿಖಿಲ್ ಕುಮಾರಸ್ವಾಮಿ ಕಾದಿದ್ದಾರೆ. ಆಗ ಎಚ್ಚೆತ್ತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಅನಧಿಕೃತ ಟೋಲ್ ಸಂಗ್ರಹ
ಬೆಂಗಳೂರು-ಮೈಸೂರು ಹೆದ್ದಾರಿಯ ಅನಧಿಕೃತ ಟೋಲ್ ಸಂಗ್ರಹ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಯಿತು. ಬಿಡದಿ ಕಣಮಿಣಿಕಿ ಬಳಿ ಇರುವ ಟೋಲ್ ಬಳಿ ಪ್ರತಿಭಟನೆ ನೇತೃತ್ವ ವಹಿಸಿದ್ದ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವುದು ಹೆದ್ದಾರಿ ಲೋಕಾರ್ಪಣೆ ಅಥವಾ ಟೋಲಾರ್ಪಣೆನೋ ಎಂದು ವ್ಯಂಗ್ಯವಾಡಿದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ
ನಾವು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ. ಗರ್ಭಿಣಿ ಸ್ತ್ರೀಯರಿಗೆ ಪ್ರೈಮರಿ ಹೆಲ್ತ್ ಕೇರ್ ಸೆಂಟರ್ ಇಲ್ಲ. ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಹೀಗೆ ರಸ್ತೆಯನ್ನು ಪೂರ್ಣಗೊಳಿಸದೇ ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನೂ ಕಲ್ಪಿಸಿಲ್ಲ. ಟೋಲ್ ಬಳಿ ಪೂರಕವಾದ ಹೋಟೆಲ್, ಶೌಚಾಲಯ, ಆಸ್ಪತ್ರೆಗಳಿಗೆ ಸ್ಥಳಾವಕಾಶವೂ ಇಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚುವರಿ ಸುಂಕ ವಸೂಲಿ
ಇದು ಅನಧೀಕೃತ ಟೋಲ್ ಸಂಗ್ರಹ ಕೇಂದ್ರವಾಗಿದ್ದು, ಪ್ರಯಾಣಿಕರಿಂದಲೂ ನಿಗದಿತ ದರಕ್ಕಿಂತ ಹೆಚ್ಚುವರಿ ಸುಂಕ ವಸೂಲಿ ಮಾಡಿ ಅನ್ಯಾಯವೆಸಗಲಾಗುತ್ತಿದೆ. ಆದ್ದರಿಂದ ನಾವು ಸಾರ್ವಜನಿಕರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ, ಅವೈಜ್ಞಾನಿಕ ರಸ್ತೆ ನಿರ್ಮಿಸಿ ಅನಿಯಮಿತ ಟೋಲ್ ಸಂಗ್ರಹದ ಹೆಸರಲ್ಲೇ ಹಗಲು ದರೋಡೆ ಮಾಡುತ್ತಿರುವುದಲ್ಲದೆ ಇದನ್ನು ಸಮರ್ಥಿಕೊಳ್ಳುತ್ತಿರುವ ಭೂಪ ಎಂದರೆ ಪ್ರತಾಪ್ ಸಿಂಹ. ಇದು ಅವರಿಗೆ ಅವಿವೇಕದ ಪರಮಾವದಿಯಾಗಿದೆ ಎಂದು ಗುಡುಗಿದರು. ಇದೇ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications