ಹಬ್ಬಕ್ಕೆ ಬಂದ ಮಗ ಮಸಣ ಸೇರಿದ; ಕನಕಪುರದಲ್ಲಿ ಪೊಲೀಸ್ ಪೇದೆ ಶವ ಪತ್ತೆ
ಕನಕಪುರ, ಜನವರಿ 17: ಸಂಕ್ರಾಂತಿ ಹಬ್ಬದಂದು ಕೆರೆಯಲ್ಲಿ ಹಸು ಮೈ ತೊಳೆಯಲು ಹೋಗಿ ಕಣ್ಮರೆಯಾಗಿದ್ದ ಪೊಲೀಸ್ ಪೇದೆಯೊಬ್ಬರ ಮೃತದೇಹ ಎರಡು ದಿನಗಳ ನಂತರ ಪತ್ತೆಯಾಗಿದೆ.
ಹುಣಸನಹಳ್ಳಿ ಕೆರೆಯಲ್ಲಿ ಪೊಲೀಸ್ ಪೇದೆ ಚಿಕ್ಕಯ್ಯ (32) ಎಂಬುವರ ಮೃತದೇಹ ಪತ್ತೆಯಾಗಿದೆ. ಕನಕಪುರ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಚಿಕ್ಕವೆಂಕಟಯ್ಯ ಎಂಬುವರ ಮಗನಾದ ಚಿಕ್ಕಯ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲ ವರ್ಷಗಳಿಂದ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಕ್ರಾಂತಿ ಹಬ್ಬಕ್ಕೆಂದು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಇವರು, ಹಸುಗಳನ್ನು ತೊಳೆಯಲು ಗ್ರಾಮದ ಸಮೀಪವಿರುವ ಕೆರೆಗೆ ಹೋದ ಸಂದರ್ಭ ಕಣ್ಮರೆಯಾಗಿದ್ದರು.
ಗ್ರಾಮದ ಕೆರೆಯಲ್ಲಿ ಊಳು ತೆಗೆದಿದ್ದು, ಆಳವಾದ ಗುಂಡಿಗಳಾಗಿವೆ. ಹಸು ತೊಳೆಯುವ ಸಂದರ್ಭ ಕೆರೆಯ ಹಳ್ಳದಲ್ಲಿ ಸಿಲುಕಿ ಈ ಘಟನೆ ನಡೆದಿರಬಹುದೆಂದು ಹೇಳಲಾಗಿದೆ. ಹಬ್ಬದ ದಿನವೇ ಕೆರೆಯಲ್ಲಿ ಮೃತದೇಹವನ್ನು ಹುಡುಕಾಡಿದರೂ ಪ್ರಯೋಜನವಾಗದೆ ಪೊಲೀಸರು ಕೈ ಚೆಲ್ಲಿದ್ದರು. ಎರಡು ದಿನಗಳ ನಂತರ ಕೆರೆಯಲ್ಲಿ ಮೃತದೇಹ ತೇಲುತ್ತಿತ್ತು.

ಪೊಲೀಸರು ಮೃತದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಚಿಕ್ಕಯ್ಯ ಅವರಿಗೆ ವರ್ಷದ ಹಿಂದೆ ವಿವಾಹವಾಗಿತ್ತು. ಹಬ್ಬಕ್ಕೆ ಬಂದ ಮಗ ಮಸಣ ಸೇರಿದ ಎಂಬ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.












Click it and Unblock the Notifications