ಸಿದ್ದನ ನೆನಪಿನಲ್ಲಿ 'ವರ್ಲ್ಡ್ ವೈಲ್ಡ್‌ಲೈಫ್ ಮೂಮೆಂಟ್' ಆರಂಭ
ರಾಮನಗರ, ಡಿಸೆಂಬರ್. 10 : ಕಾಲು ಮುರಿದುಕೊಂಡು ನರಕಯಾತನೆ ಅನುಭವಿಸಿ ಕಾಡಾನೆ 'ಸಿದ್ದ' ಸಾವನ್ನಪ್ಪಿ ಶನಿವಾರಕ್ಕೆ ಒಂದು ವರ್ಷ ಕಳೆದಿದೆ. ಸಿದ್ದ ಸಾವನ್ನಪ್ಪಿದರು ಸಹ ಅವನ ನೆನಪು ಇನ್ನೂ ಪ್ರಾಣಿ ಪ್ರಿಯರನ್ನು ಕಾಡುತ್ತಿದೆ.
ಸಿದ್ದನ ನರಕಯಾತನೆಯನ್ನು ನೆನೆದು ಆತನಿಗೆ ಸ್ವರ್ಗ ಪ್ರಾಪ್ತಿಯಾಗಲೆಂದು ಹೋಮಹವನ ನಡೆಸಿದ್ದಾರೆ. ಇನ್ನು ಕೆಲವು ಪ್ರಾಣಿ ಪ್ರಿಯರು ವನ್ಯಜೀವಿ ಸಂರಕ್ಷಣೆಗಾಗಿ ಚಳುವಳಿಯನ್ನು ಸಹ ಸಿದ್ದನ ನೆನಪಿಗಾಗಿ ಆರಂಭಿಸಿದ್ದಾರೆ.
ಕಾಡಾನೆ ಸಿದ್ದ ಅಂತಾ ನೆನಪಿಗೆ ಬಂದ್ರೆ ಸಾಕು ಆತನ ನರಕಯಾತನೆಗಳು ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಂಚಿನಬೆಲೆ ಹಿನ್ನೀರಿನಲ್ಲಿ ಸಿದ್ದನ ಉಳುವಿಗಾಗಿ ಹೋಮ-ಹವನ, ಚಿಕಿತ್ಸೆ, ಮಿಲಿಟರಿ ನೆರವು ಎಲ್ಲವನ್ನೂ ಮಾಡಿದರೂ ಫಲ ಮಾತ್ರ ಸಿಗಲಿಲ್ಲ.

ಬರೋಬ್ಬರಿ 99 ದಿನಗಳ ನರಕಯಾತನೆ ಅನುಭವಿಸಿದ್ದ ಸಿದ್ದ ಸಾವನ್ನಪ್ಪಿ ಶನಿವಾರಕ್ಕೆ 1ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಸಿಗಳು ಸಿದ್ದನ ನೆನಪಿಗಾಗಿ 1ನೇ ವರ್ಷದ ಪುಣ್ಯತಿಥಿ ಕಾರ್ಯ ನಡೆಸಿದರು. ಗಣಪತಿ ಹೋಮ ಹಾಗೂ ನವಗ್ರಹ ಹೋಮ ಮಾಡಲಾಯಿತು. ಸಿದ್ದನ ಸಮಾಧಿಯನ್ನು ಹೂವುಗಳಿಂದ ಸಿಂಗರಿಸಿ ಮನುಷ್ಯರ ತಿಥಿ ಕಾರ್ಯ ನೆರವೇರಿಸುವಂತೆ ಮಾಡಲಾಯಿತು.
ಸಿದ್ದನ ನೆನಪು ಸ್ಥಳೀಯ ಮಂಚಿನಬೆಲೆ ಅಲ್ಲದೇ ಜಿಲ್ಲೆಯ ಜನರನ್ನೂ ಕಾಡುತ್ತಿದೆ. ಇದರ ಜೊತೆಗೆ ಸಿದ್ದನ ನರಕಯಾತನೆಯನ್ನು ಮಾಧ್ಯಮಗಳಲ್ಲಿ ನೋಡಿದವರು ಸಿದ್ದನ ನೆರವಿಗೆ ಬಂದಿದ್ದರು. ಸಿದ್ದನ ಚಿಕಿತ್ಸೆಗಾಗಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವರು ಕೂಡಾ ಸಿದ್ದನ ನೆನಪಿನಲ್ಲಿ ಸಮಾಧಿ ಬಳಿ ಆಗಮಿಸಿದ್ದರು.
ಮತ್ತೊಂದೆಡೆ ಜನಜಾಗೃತಿಗಾಗಿ ಸಿದ್ದನ ಭಿತ್ತಿಪತ್ರಗಳನ್ನು ಹಿಡಿದು ಜನರು ನಿಂತಿದ್ದರು. ಇದೇ ವೇಳೆ ಕಾಡು ಪ್ರಾಣಿಗಳ ಸಂರಕ್ಷಣೆಗಾಗಿ ಚಳುವಳಿಯೊಂದನ್ನು ಆರಂಭಿಸಿದರು. ಕಾಡುಪ್ರಾಣಿಗಳ ಸಂರಕ್ಷಣೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ 'ವರ್ಲ್ಡ್ ವೈಲ್ಡ್‌ಲೈಫ್ ಮೂಮೆಂಟ್' ಎಂಬ ಚಳುವಳಿಯನ್ನು ಬೆಂಗಳೂರಿನ ಕೆಲವು ವನ್ಯಜೀವಿ ಪ್ರೇಮಿಗಳು ಆರಂಭಿಸಿದರು.













Click it and Unblock the Notifications