ಮನವಿಗೆ ಸ್ಪಂದಿಸದ ಅನಿತಾ ಕುಮಾರಸ್ವಾಮಿ; ಕಾರಿಗೆ ಅಡ್ಡಹಾಕಿದ ವ್ಯಕ್ತಿ
ರಾಮನಗರ, ಡಿಸೆಂಬರ್ 11: ಮನವಿ ಸಲ್ಲಿಸಲು ಬಂದ ವ್ಯಕ್ತಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೊರಟುಹೋಗಿದ್ದು, ಅವರ ಈ ನಡೆಗೆ ವಿರೋಧ ವ್ಯಕ್ತವಾಗಿದೆ.
ಇಂದು ರಾಮನಗರದ ನಗರಸಭೆಯಲ್ಲಿ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು. ಶಾಸಕಿ ಅನಿತಾ ಕುಮಾರಸ್ವಾಮಿ ಈ ಸಭೆಯಲ್ಲಿ ಭಾಗವಹಿಸಿದ್ದು, ಸಭೆ ಮುಗಿಯುತ್ತಿದ್ದಂತೆ ಅವರು ಹೊರಗೆ ಬಂದಾಗ ಮನವಿ ಸಲ್ಲಿಸಲು ವಿವೇಕಾನಂದ ನಗರ ನಿವಾಸಿ ರಾಜು ಅವರು ಮುಂದಾಗಿದ್ದಾರೆ.
ಹಲವು ವರ್ಷಗಳಿಂದ ಗ್ಯಾಸ್ ಗೋಡೌನ್ ಸ್ಥಳಾಂತರಕ್ಕೆ ನೀಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮನವಿ ಸಲ್ಲಿಸಲು ಬಂದಿದ್ದ ಅವರಿಗೆ ಅನಿತಾ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನಡೆದಿದ್ದಾರೆ. ಈ ಸಂದರ್ಭ ಕಾರಿಗೆ ಅಡ್ಡ ಕುಳಿತು ರಾಜು ಮತ್ತು ಸಾರ್ವಜನಿಕರು ಗ್ಯಾಸ್ ಗೋಡೌನ್ ಸ್ಥಳಾಂತರಕ್ಕೆ ತಕ್ಷಣ ಆದೇಶ ನೀಡಲು ಒತ್ತಾಯಿಸಿದ್ದಾರೆ.

ಕಾರಿಗೆ ಅಡ್ಡ ಕುಳಿತಿದ್ದನ್ನು ನೋಡಿ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ತೆರವಿಗೆ ಮುಂದಾದಾಗ ಜಗಳ ಏರ್ಪಟ್ಟಿದೆ. ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿಯ ಮೇಲೆ ಶಾಸಕಿ ಎದುರೇ ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು. ಓಟು ಕೊಟ್ಟು ಗೆಲ್ಲಿಸಿದ ತಪ್ಪಿಗೆ ಸಮಸ್ಯೆ ಹೇಳಿಕೊಳ್ಳುವುದು ಬೇಡ್ವಾ ಎಂದು ಹಲ್ಲೆಗೊಳಗಾದ ರಾಜು ಪ್ರಶ್ನೆ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಯಾವುದಕ್ಕೂ ಸ್ಪಂದಿಸದಿದ್ದ ಶಾಸಕಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications