ಚನ್ನಪಟ್ಟಣ ವಿಶೇಷ; ವರನಟನಿಗೆ ದೇವರ ಸ್ಥಾನ, ವರ್ಷಪೂರ್ತಿ ಪೂಜೆ!
ರಾಮನಗರ, ಏಪ್ರಿಲ್ 24; ತಮ್ಮ ನಟನೆಯ ಮೂಲಕ ಸಾವಿರಾರು ಅಭಿಮಾನಿಗಳ ಬಾಳಲ್ಲಿ ಬದಲಾವಣೆ ತಂದ ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ. ರಾಜ್ ಕುಮಾರ್ 94ನೇ ಜನ್ಮದಿನಾಚರಣೆಯನ್ನು ಕರುನಾಡಿನ ಅಸಂಖ್ಯಾತ ಅಭಿಮಾನಿಗಳು ಹಲವು ಸಾರ್ಥಕ ಕಾರ್ಯಗಳ ಮೂಲಕ ಆಚರಣೆ ಮಾಡುತ್ತಿದ್ದಾರೆ.
ಡಾ. ರಾಜ್ ನಟಿಸಿದ 'ಬಂಗಾರದ ಮನುಷ್ಯ' ಸಿನಿಮಾ ನೋಡಿದ ಹಲವು ಅಭಿಮಾನಿಗಳು ಪಟ್ಟಣದ ಜೀವನ ತೊರೆದು ಹಳ್ಳಿಗಳಿಗೆ ತೆರಳಿ ಮತ್ತೆ ಕೃಷಿಕರಾಗಿದ್ದು, ಮತ್ತಷ್ಟು ಅಭಿಮಾನಿಗಳು ಡಾ. ರಾಜ್ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.
ವರ್ಷದಲ್ಲಿ ಒಂದು ದಿನ ವರನಟನ ಹುಟ್ಟುಹಬ್ಬದ ನೆನಪಿನಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ತನ್ನ ಮನೆಯ ದೇವರ ಕೋಣೆಯಲ್ಲಿ ಡಾ. ರಾಜ್ ಕುಮಾರ್ ಭಾವಚಿತ್ರವಿಟ್ಟು ವರ್ಷಪೂರ್ತಿ ಪೂಜೆ ಸಲ್ಲಿಸುವ ನಾಗೇಶ್ ಅಪರೂಪದ ಅಭಿಮಾನಿ.
ಡಾ. ರಾಜ್ ಅವರ ಅಪ್ಪಟ ಅಭಿಮಾನಿ ರಾಜ್ ಭಾವಚಿತ್ರವನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಅಲ್ಲದೇ ರಾಜ್‍ಕುಮಾರ್ ಅಭಿನಯದ ಚಿತ್ರಗಳ ಎಲ್ಲ ಸಿಡಿಗಳು ಹಾಗೂ ತಮ್ಮ ಬೈಕ್‍ಗಳಲ್ಲಿ ಡಾ. ರಾಜ್ ಭಾವಚಿತ್ರಗಳನ್ನು ಹಾಕಿಸಿದ್ದಾರೆ.

ಡಾ. ರಾಜ್ ಕುಮಾರ್ ಅಭಿಮಾನಿ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಗೆಚಗೆರೆ ಗ್ರಾಮದ ನಿವಾಸಿ ನಾಗೇಶ್ ವರನಟ ಡಾ. ರಾಜ್ ಕುಮಾರ್ ಅಪ್ಪಟ ಅಭಿಮಾನಿ. ಈತನ ದಿನ ಪ್ರಾರಂಭವಾಗುವುದೇ ಡಾ. ರಾಜ್ ಕುಮಾರ್ ಭಾವಚಿತ್ರವನ್ನು ನೋಡಿ ಬಳಿಕ ಪೂಜೆ ಮಾಡಿದ ಬಳಿಕ. ಕನ್ನಡ ಚಿತ್ರರಂಗದ ಮೇರುಪರ್ವತ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಸಾವನ್ನಪ್ಪಿದ ದಿನದಿಂದ ಇಲ್ಲಿನ ತನಕ ತನ್ನ ಮನೆಯ ದೇವರ ಕೋಣೆಯಲ್ಲಿ ಅವರ ಭಾವಚಿತ್ರವನ್ನಿಟ್ಟು ಪೂಜೆ ಮಾಡುತ್ತಿದ್ದಾರೆ.
ಮನೆಯಲ್ಲಿ ಪ್ರತಿನಿತ್ಯ ವರನಟನನ್ನು ಪೂಜಿಸುವ ಜೊತೆಗೆ ಡಾ. ರಾಜ್ ಹುಟ್ಟುಹಬ್ಬದ ದಿನದಂದು ಆಸ್ಪತ್ರೆಗೆ ತೆರಳಿ ಹಣ್ಣು, ಹಂಪಲುಗಳನ್ನು ರೋಗಿಗಳಿಗೆ ವಿತರಣೆ ಮಾಡುತ್ತಾರೆ. ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬೆಂಗಳೂರಿಗೆ ತೆರಳಿ ಡಾ. ರಾಜ್ ಕುಮಾರ್ ಸಮಾಧಿ ದರ್ಶನ ಮಾಡಿ ಪೂಜೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ.

ಭಾವಚಿತ್ರ, ಸಿಡಿಗಳ ಸಂಗ್ರಹ
ಡಾ. ರಾಜ್ ಕುಮಾರ್ ಅಭಿಮಾನಿಯಾಗಿರುವ ನಾಗೇಶ್ ಮನೆಯಲ್ಲಿ ರಾಜ್ ಅಭಿಯನದ ನೂರಕ್ಕೂ ಹೆಚ್ಚು ಸಿಡಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ರಾಜ್‍ಕುಮಾರ್ ಭಾವಚಿತ್ರ ಮತ್ತು ಅವರ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ, ಲೇಖನಗಳನ್ನು ಸಂಗ್ರಹಿಸುವ ಹವ್ಯಾಸವಿದೆ.
"ನಾನು ಚಿಕ್ಕಂದಿನಿಂದಲೇ ರಾಜ್ ಕುಮಾರ್ ಅಭಿಮಾನಿಯಾಗಿದ್ದು ಅವರನ್ನು ದೇವರು ಅಂತಲೇ ನಾನು ನಂಬಿದ್ದೇನೆ. ಹಾಗಾಗಿ ಪ್ರತಿ ದಿನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತೇನೆ ಹಾಗೂ ಅವರ ಬದುಕಿಗೆ ಸಂಬಂಧಿಸಿದ ಎಲ್ಲಾ ಸಿಡಿ, ಬರಹ, ಲೇಖನಗಳನ್ನು ಸಂಗ್ರಹ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ" ಎನ್ನುತ್ತಾರೆ ನಾಗೇಶ್.

ಬೇರೆ ನಟರನ್ನು ಇಷ್ಟ ಇಟ್ಟಿಲ್ಲ
ಡಾ. ರಾಜ್ ಕುಮಾರ್ ಅಭಿಮಾನಿಯಾದ ನಾಗೇಶ್ 13 ವರ್ಷದವನಿರುವಾಗಲೇ ಚನ್ನಪಟ್ಟಣದ ಶಿವಾನಂದ ಟಾಕೀಸ್‍ನಲ್ಲಿ ತಮ್ಮ ಪೋಷಕರ ಜೊತೆ ಸಿನಿಮಾ ನೋಡಿದ್ದರು. ಅಂದಿನಿಂದ ಇಂದಿನವರೆಗೆ ಬೇರೆ ಯಾವುದೇ ನಟರನ್ನೂ ಇಷ್ಟ ಪಟ್ಟಿಲ್ಲ. ನಾಗೇಶ್ ತಾಯಿ ಜಯಮ್ಮ ಕೂಡಾ ಡಾ. ರಾಜ್ ಅಭಿಮಾನಿ. ಮನೆಯ ಒಳಗೆ ರಾಜ್‍ಕುಮಾರ್ ಪೋಟೋಗಳು, ಸಿಡಿಗಳು ತುಂಬಿವೆ. ಈತನ ಹವ್ಯಾಸ ಹಾಗೂ ಅಭಿಮಾನವನ್ನು ಕಂಡ ಇವರ ಮನೆಯವರು, ಅಕ್ಕಂದಿರು, ಮಕ್ಕಳು ಕೂಡಾ ರಾಜ್‍ಕುಮಾರ್ ಅಭಿಮಾನಿಗಳಾಗಿದ್ದಾರೆ.
ನಾಗೇಶ್ ಪ್ರತಿನಿತ್ಯ ಮಾಡುವ ಪೂಜೆ, ರಾಜ್‍ಕುಮಾರ್ ಅಭಿನಯದ ಚಿತ್ರಗಳ ಸಿಡಿ, ಕ್ಯಾಸೆಟ್ ಸಂಗ್ರಹ, ಭಾವಚಿತ್ರಗಳ ಸಂಗ್ರಹ ಹಾಗೂ ಡಾ. ರಾಜ್ ನೆನಪಿನಲ್ಲಿ ನಡೆಸುವ ಸಾಮಾಜಿಕ ಕೆಲಸಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
Recommended Video

ಡಾ. ರಾಜ್ ಭೇಟಿಯಾಗಲಿಲ್ಲ
ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣದ ಸುತ್ತಾ ಮುತ್ತಾ ಡಾ. ರಾಜ್ ಅಭಿಮಾನಿ ಎಂದೇ ಪರಿಚಿತರಾಗಿರುವ ನಾಗೇಶ್ ಅವರ ದೈನಂದಿನ ಚಟುವಟಿಕೆಗಳು ಡಾ. ರಾಜ್ ಮುಖ ದರ್ಶನದೊಂದಿಗೆ ಆರಂಭವಾಗಬೇಕು.
ಡಾ.ರಾಜ್ ಬದುಕಿದ್ದಾಗ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿಲ್ಲ ಎಂಬ ಕೊರಗು ನಾಗೇಶ್ ಕಾಡುತ್ತಿದೆ. ಡಾ. ರಾಜ್ ಮೇಲಿನ ನಾಗೇಶ್ ಅಭಿಮಾನದ ಸುದ್ದಿ ಡಾ. ರಾಜ್ ಕುಮಾರ್ ಕುಟುಂಬಕ್ಕೆ ತಿಳಿದು ನಾಗೇಶ ಅವರನ್ನು ಕರೆಸಿಕೊಂಡು ನಾಗೇಶ್ ಬೆನ್ನು ತಟ್ಟಿದ್ದಾರೆ.












Click it and Unblock the Notifications